Index   ವಚನ - 91    Search  
 
ವಾರಿ ತೆಂಗಿನ ಮರದಲ್ಲಿ ಏರಿತ್ತೊ ? ಅಲ್ಲಾ, ಬೇರೊಂದು ಮಂತ್ರದಲ್ಲಿ ತುಂಬಿತ್ತೊ ? ಅಲ್ಲಾ ವೃಕ್ಷದ ಸಹಜ ಬೀಜವೊ ? ನೀರು ಬಲಿದು ಅದರೊಳಗೆ ಅರತು, ಆ ಸಾರವೆ ಕಾಯಾದಲ್ಲಿ, ಆ ಕಾಯ ತುಷಾರ ಹಿಂಗಿ, ನೆರೆ ಬಲಿತು, ಹಣ್ಣು ಎಣೆಯಾದಲ್ಲಿ, ನೀರೆಲ್ಲಿ ಅಡಗಿತ್ತು ? ಹಿಪ್ಪೆ, ಕವಚವೆಲ್ಲಿದ್ದಿತ್ತು ? ಇಂತೀ ಕಾಯ ಆತ್ಮ ಮೇಲೆಂದರಿವೆಂಬ ಕುರುಹೆಲ್ಲಿದ್ದಿತ್ತು ?, ಎಂಬುದನರಿವುದಕ್ಕೆ ಪುರಾಣವ ಪೋಷಿಸಿಕೊಳ್ಳಿ, ಶಾಸ್ತ್ರವ ಸಂದಣಿಸಿಕೊಳ್ಳಿ, ವೇದದ ಆದ್ಯಂತವ ಸಾಧಿಸಿಕೊಳ್ಳಿ, ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡುಕೊಳ್ಳಿ, ಇಂತೀ ಚಿದಾತ್ಮನು ಬಂಧಮೋಕ್ಷಕರ್ಮಂಗಳಲ್ಲಿ ದ್ವಂದಿತನೋ ? ಆ ಅಂಗಭಾವ ವಿರಹಿತನೋ ? ಈ ಉಭಯದ ಸಂದೇಹವುಳ್ಳನ್ನಕ್ಕ ಕರ್ಮವ ಮಾಡುವಂಗೆ, ನಿರ್ಮಲವೊಂದುಂಟೆಂದು ಅರಿವಂಗೆ, ಇಂತೀ ಭೇದಂಗಳನರಿತು, ನಿರವಯದ ಸಮ್ಮಾನದ ಸುಖಿಯಾದೆನೆಂಬವಂಗೆ, ಅದು ಭಿನ್ನರೂಪೋ, ಅಭಿನ್ನರೂಪೋ ? ಆ ನಿಜದ ನೆಲೆಯ ನೀವೇ ಬಲ್ಲಿರಿ. ಕಾಮಧೂಮ ಧೂಳೇಶ್ವರನಲ್ಲಿ ಕಾಳಿಕೆ ಹಿಂಗಿದ ಕಣ್ಣಿನವಂಗಲ್ಲದೆ ಕಾಣಬಾರದು.