ಬಯಲೊಳಗಣ ರೂಪು,
ರೂಪಿನೊಳಗಣ ಬಯಲು,
ಉಭಯವ ವಿಚಾರಿಸಿ ನೋಡುವಲ್ಲಿ,
ಕುಂಭದೊಳಗೆ ನೀರ ತುಂಬಿ,
ಸಿಂಧುವಿನೊಳಗೆ ಮುಳುಗಿಸಲಾಗಿ,
ಅದರೊಳಗೂ ನೀರು, ಹೊರಗೂ ನೀರು.
ಹೊರಗಣ ನೀರು ಒಳಗಾಯಿತ್ತು,
ಒಳಗಣ ನೀರು ಹೊರಗಾಯಿತ್ತು.
ಕುಂಭದೊಳಗಣ ನೀರಂಗಕ್ಕೆ
ಒಳಗೋ ಹೊರಗೋ ಎಂಬುದ ವಿಚಾರಿಸಿ ,
ತಿಳಿದು,ಅಂಗದ ಮೇಲಿಹ ಲಿಂಗ,
ಲಿಂಗವ ಧರಿಸಿಹ ಅಂಗ,
ಆ ಅರುಹಿನ ಕುರುಹಿಂಗೆ
ಒಳಗೋ ಹೊರಗೋ ಎಂಬುದ ವಿಚಾರಿಸಿ,
ಕರ್ಪುರದ ಹೊಗೆಯೊಳಗೆ ಉಭಯ ಬಯಲಾಗಿ,
ಮಡಕೆ ಉಳಿಯಿತ್ತದೇಕೆ ?
ಘಟ ಉಳಿದು ಆತ್ಮ ಬಯಲಾಯಿತ್ತದೇಕೆ ?
ಉಭಯ ನಿರಂತವಾದಲ್ಲಿ, ಉರಿಯಿಂದ ಕರ್ಪುರ ನಷ್ಟ,
ಕರ್ಪುರದಿಂದ ಉರಿ ನಷ್ಟವಾದಂತೆ.
ಇಂತೀ ಉಭಯಸ್ಥಲದೊಳಗೆ ಅಂಗಲಿಂಗ, ಪ್ರಾಣಲಿಂಗ
ಉಭಯವನೊಂದು ಮಾಡಿ ತಿಳಿದು, ನಿಜದಲ್ಲಿ ನಿಂದ
ಲಿಂಗಾಂಗಿಯ ಕೂಗಿನ ಕುಲವಿಲ್ಲ, ಮಹಾಮಹಿಮ ಮಾರೇಶ್ವರಾ
Art
Manuscript
Music
Courtesy:
Transliteration
Bayaloḷagaṇa rūpu,
rūpinoḷagaṇa bayalu,
ubhayava vicārisi nōḍuvalli,
kumbhadoḷage nīra tumbi,
sindhuvinoḷage muḷugisalāgi,
adaroḷagū nīru, horagū nīru.
Horagaṇa nīru oḷagāyittu,
oḷagaṇa nīru horagāyittu.
Kumbhadoḷagaṇa nīraṅgakke
oḷagō horagō embuda vicārisi,
tiḷidu,aṅgada mēliha liṅga,
liṅgava dharisiha aṅga,
Ā aruhina kuruhiṅge
oḷagō horagō embuda vicārisi,
karpurada hogeyoḷage ubhaya bayalāgi,
maḍake uḷiyittadēke?
Ghaṭa uḷidu ātma bayalāyittadēke?
Ubhaya nirantavādalli, uriyinda karpura naṣṭa,
karpuradinda uri naṣṭavādante.
Intī ubhayasthaladoḷage aṅgaliṅga, prāṇaliṅga
ubhayavanondu māḍi tiḷidu, nijadalli ninda
liṅgāṅgiya kūgina kulavilla, mahāmahima mārēśvarā