Index   ವಚನ - 11    Search  
 
ಏಕತತ್ವ ತ್ರಿತತ್ವ ಪಂಚತತ್ವ ಪಂಚವಿಂಶತಿತತ್ವ ಷಟ್ತ್ರಿಂಶತ್ ತತ್ವವ ಗರ್ಭೀಕರಿಸಿಕೊಂಡಿಪ್ಪಾತನು ಅಜಗಣ್ಣನೆ. ತತ್ವವೆಲ್ಲಕ್ಕಧಿಕವಾಗಿಪ್ಪಾತನು ಅಜಗಣ್ಣನೆ, ಮಹಾತತ್ವವು ಅಜಗಣ್ಣನೆ, ಶ್ರೀಗುರುತತ್ವವು ಅಜಗಣ್ಣನೆ, ಪರತತ್ವವು ಅಜಗಣ್ಣನೆ. ಶಿವಶಿವಾ ಹರಹರಾ, ಸಕಲವೇದಶಾಸ್ತ್ರಪುರಾಣಾಗಮ ಅಷ್ಟಾದಶ ವಿದ್ಯಂಗಳು ಸರ್ವ ವಿದ್ಯಂಗಳು ಸಪ್ತಕೋಟಿ ಮಹಾಮಂತ್ರಂಗಳು ಉಪಮಂತ್ರವನಂತಕೋಟಿಗಳಿಗೆ ಮಾತೃಸ್ಥಾನವಾದಾತನು ಅಜಗಣ್ಣನೆ. ಲಯ ಕಾಲ ಸ್ಥಿತಿಗಳಿಗೆ ಕಾರಣವಾಗಿರ್ಪಾತನು ಅಜಗಣ್ಣನೆ. ಮಂತ್ರರಾಜನು ಅಜಗಣ್ಣನೆ, ಮೂಲಮಂತ್ರವು ಅಜಗಣ್ಣನೆ. ಏಕವಾದ ಮಹಾಲಿಂಗವು ಅಜಗಣ್ಣನೆ, ಮಹಾಲಿಂಗವಾಗಿಪ್ಪಾತನು ಅಜಗಣ್ಣನೆ. ಮಹಾಸದ್ಭಕ್ತನು ಅಜಗಣ್ಣನವ್ವಾ. ತತ್ವಜ್ಞಾನ ಅಜಗಣ್ಣನೆ, ತತ್ವಮಯನು ಅಜಗಣ್ಣನೆ. ಮಹಾಮಂತ್ರ ಮುಖೋದ್ಗತವಾದಾತನು ಅಜಗಣ್ಣನೆ. ಮಹಾಲಿಂಗೈಕ್ಯನು ಅಜಗಣ್ಣನೆ. ಆತನೆ ಮಹಾಘನಮಹತ್ತನೊಳಕೊಂಡಿರ್ಪನಾಗಿ ಶಿವಶಿವಾ, ಸದ್ಭಕ್ತ ಅಜಗಣ್ಣ ಗುರುವಿಂಗೆ ಪೂಜೆ ಅರ್ಚನೆ ಭಜನೆಗಳಿಲ್ಲವಾಗಿ ಉಪಮಾತೀತ ಅಜಗಣ್ಣನು, ವಾಙ್ಮನಕ್ಕತೀತ ಅಜಗಣ್ಣನು. ಮಹಾಗುರುವ ಕಾಣದೆ ನಾನೆಂತು ತಾಳುವೆನವ್ವಾ? ಬ್ರಹ್ಮರಂಧ್ರದಲ್ಲಿ ಗುರುಮೂರ್ತಿಯಾಗಿಪ್ಪ ಪರಮಾತ್ಮನು ಅಜಗಣ್ಣನೆ. ಭ್ರೂಮಧ್ಯದಲ್ಲಿ ಲಿಂಗಮೂರ್ತಿಯಾಗಿಪ್ಪಾತನು ಅಜಗಣ್ಣನೆ. ಹೃದಯದಲ್ಲಿ ಜಂಗಮಮೂರ್ತಿಯಾಗಿಪ್ಪಾತನು ಅಜಗಣ್ಣನೆ ಇಂತಪ್ಪ ಅಜಗಣ್ಣನೇನಡಗಿಸಿದನವ್ವಾ. ಧ್ಯಾನಿಸಿ ನೆನೆದಡೆ ಶೋಕಿಸಿದರೆಂಬರೆಲೆ ಅವ್ವಾ. ಈ ಅಜಗಣ್ಣತಂದೆಯನಗಲಿ ನಾನೆಂತು ಸೈರಿಸುವೆನೆಲೆ ಸತ್ಯಕ್ಕ ತಾಯೆ ಆಹಾ.