ನಿಷ್ಕಳಂಕಾತ್ಮನು ನಿಜಪ್ರಕೃತಿವಶದಿಂ
ಮನ ನೆನಹು ಭಾವದೆ ತ್ರಿವಿಧಸ್ವರೂಪವಾಯಿತ್ತು.
ಆ ಮನವೊಗ್ದಿದುದೆ ನೆನಹಿಗೆ ಬಂದಿತ್ತು.
ಅದೇ ಭಾವದಲ್ಲಿ ತೋರಿತ್ತು; ಅದೇ ಪ್ರಾಣವಾಯಿತ್ತು;
ಅದೇ ಚೈತನ್ಯಸ್ವರೂಪಮಾಗಿ ತನುವನೆಳದಾಡಿತ್ತು.
ಅದಕ್ಕೆ ವಾಯುವೇ ಅಂಗವಾಗಿ ಕರ್ಮಾಧೀನಮೆನಿಸಿ,
ತಾನೆಂಬಹಂಕಾರದಿಂ ತನ್ನ ತಾ ಮರೆತು ತೊಳಲಿಬಳಲುತ್ತಿರಲು,
ಅನೇಕಜನ್ಮ ಸಂಚಿತಕರ್ಮ ಸಮೆದು,
ಗುರುಕರುಣ ನೆಲೆಗೊಂಡಲ್ಲಿ ಗಗನಾಂಗಿಯಾಗಿ,
ಆ ಮನಕ್ಕೆ ತಾನೇ ಆಧಾರಮಾಗಿ, ತಾನೇ ಪರಮನಾಗಿ,
ತಾನೇ ಪ್ರಸನ್ನಮಾಗಿರ್ದ ಮಹಾಜ್ಞಾನಶಕ್ತಿಯಂ ಕಂಡದರೊಳಗೆ ಕೂಡಿ,
ಸಾಧಕಕ್ಕೊಳಗಾದ ಮನವೇ ಘನವಾಯಿತ್ತು.
ಆ ಘನವೇ ಲಿಂಗವಾಯಿತ್ತು, ಆ ಲಿಂಗವೇ ಪ್ರಾಣವಾಯಿತ್ತು,
ಆ ಪ್ರಾಣವೇ ಪರಮಾತ್ಮಸ್ವರೂಪಮಾಗಿ
ತತ್ತ್ವಮಸಿಪದದಿಂದತ್ತತ್ತ ಹಮ್ಮನಳಿದು
ಸುಮ್ಮನೆಯಾದುದೆ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ.