ಇಂದ್ರಿಯಸ್ವರೂಪಮಾದ ತನುವೇ ಜಾಗ್ರವು,
ವಿಷಯಸ್ವರೂಪಮಾದ ಮನವೇ ಸ್ವಪ್ನವು,
ಅನುಭವಸ್ವರೂಪಮಾದ ಜೀವನಲ್ಲಿ ಸುಷುಪ್ತಿಯು.
ಪಾಪವೆಂಬ ಪಂಕದಲ್ಲಿ ಹುಟ್ಟಿ ಆಸೆಯೆಂಬ ಬಿಸದೊಳಗೆ ಕೂಡಿ
ಅಷ್ಟಭೂತಂಗಳೆಂಬಷ್ಟದಳಂಗಳಿಂ ಚಿತ್ತವೆಂಬ ಮೇರುವಿನಿಂ
ಯುಕುತಮಾಗಿರ್ಪ ಹೃತ್ಕಮಲದಲ್ಲಿ ಜೀವನು ಸುಷುಪ್ತಿಯಂ ಹೊಂದಿ,
ತನುವಿನ ಜಾಗ್ರವು ಮನದ ಸ್ವಪ್ನವಲ್ಲದೆ,
ತನ್ನ ನಿಜವೆಲ್ಲವೂ ಸುಷುಪ್ತಿಯಂ ಹೊಂದಿ ತನು ಸೋಂಕಿದಲ್ಲಿ ತಿಳುವುತ್ತಂ,
ಮರಳಿ ನಿದ್ರಾರೂಪದಿಂ ಮರವುತ್ತಲಿರ್ಪ ಜೀವನ ಪರಿಯ ನೋಡಾ.
ಇಂತು ಭವಭವಂಗಳಲ್ಲಿ ತೊಳಲುವ ಜೀವಂಗೆ ಗುರುಸಂಸ್ಕಾರದಿ
ಲಿಂಗವೆಂಬ ಪೂರ್ವಾಚಲದಲ್ಲಿ ಜ್ಞಾನಾರ್ಕೋದಯಮಾಗಿ,
ಭಾವವೆಂಬ ಮೋಹ ಬಯಲಲ್ಲಿ ಗಮಿಸುತ್ತಿರಲು,
ಹೃತ್ಕಮಲಂ ವಿಕಸಿತಮಾಗಿ ಆನಂದಮಕರಂದದೊಡನೆ ಕೂಡಿ,
ಗುರುಮಂತ್ರಮಲಯಾನಿಲನು ನಿಜವಾಸನೆವಿಡಿದು ಬೀಸುತ್ತಿರಲು,
ಜೀವ ಸುಷುಪ್ತಿಭ್ರಾಂತಿಯಳಿದು,
ಪರಮಜಾಗ್ರತ್ಸ್ವರೂಪನಪ್ಪ ಪರಮಾತ್ಮನಾಗಿ,
ತನುವಿನ ಜಾಗ್ರ, ಮನದ ಸ್ವಪ್ನಗಳಳಿದು,
ಪರಮನ ಮಧ್ಯಾವಸ್ಥೆಯಲ್ಲಿ ಲೀನಮಾಗಲು,
ಅಷ್ಟಭೂತಂಗಳುಂ ಅಷ್ಟಾವರಣಂಗಳಾದವದೆಂತೆಂದೊಡೆ:
ಪೃಥ್ವಿಯೇ ಭಸ್ಮವು, ಜಲವೇ ಪಾದೋದಕವು,
ಅಗ್ನಿಯೇ ರುದ್ರಾಕ್ಷವು, ವಾಯುವೇ ಪ್ರಸಾದವು,
ಆಕಾಶವೇ ಮಂತ್ರವು, ಅಹಂಕಾರವೇ ಲಿಂಗವು,
ಮಹವೇ ಗುರುವು, ಚಿತ್ತವೇ ಜಂಗಮವು,
ನಿಜವು ಪ್ರಸನ್ನಮಾಗಿ ಮನವೇ ವೃಷಭೇಶ್ವರನಾಗಿ
ತನುವೇ ಕೈಲಾಸಪರ್ವತಮಾಗಿ
ಸಕಲ ಗುಣಂಗಳೇ ಶಿವಗಣಂಗಳಾಗಿ;
ಸಕಲಜನ್ಮಕರ್ಮಪ್ರಪಂಚಪರದೊಳಡಗಿತ್ತೆಂತೆಂದೊಡೆ
ಕಾಲದಲ್ಲಿ ಬ್ರಹ್ಮಾಂಡಂಗಳಡಗಿ ರೂಪುದೋರದಿರ್ಪಂತೆ,
ಚಿದಾಕಾಶದಲ್ಲಿ ಲೀನಮಾಗೆ, ತಾನೇ ಶಿವನಾಗಿ,
ಅಭೇದ ಬ್ರಹ್ಮವಾಯಿತ್ತೆಂತೆಂದೊಡೆ:
ವಸ್ತುಸ್ವರೂಪಮಾದ ಸುವರ್ಣವ ಕಾಸಿ, ಕರಗಿಸಿ;
ಉಳಿದ ನಿಜಮಂ ತೆಗೆದು,
ಬೆಳುಗಾರ ಮಿಕ್ಕಿ, ಮಹದೊಳಗೆ ಬೆರಸಿ,
ಎರಡನ್ನೂ ಒಂದುಮಾಡಿ,
ತಾನದರೊಳಗೆ ಬೆರೆದು ಭೇದದೋರದಿರ್ಪಂತೆ,
ಮನಸ್ಸು ಜೀವ ಪರಮರನೊಂದುಮಾಡಿ,
ತಾನದರೊಳಗೆ ಬೆರೆದು,
ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ.
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Indriyasvarūpamāda tanuvē jāgravu,
viṣayasvarūpamāda manavē svapnavu,
anubhavasvarūpamāda jīvanalli suṣuptiyu.
Pāpavemba paṅkadalli huṭṭi āseyemba bisadoḷage kūḍi
aṣṭabhūtaṅgaḷembaṣṭadaḷaṅgaḷiṁ cittavemba mēruviniṁ
yukutamāgirpa hr̥tkamaladalli jīvanu suṣuptiyaṁ hondi,
tanuvina jāgravu manada svapnavallade,
tanna nijavellavū suṣuptiyaṁ hondi tanu sōṅkidalli tiḷuvuttaṁ,
Maraḷi nidrārūpadiṁ maravuttalirpa jīvana pariya nōḍā.
Intu bhavabhavaṅgaḷalli toḷaluva jīvaṅge gurusanskāradi
liṅgavemba pūrvācaladalli jñānārkōdayamāgi,
bhāvavemba mōha bayalalli gamisuttiralu,
hr̥tkamalaṁ vikasitamāgi ānandamakarandadoḍane kūḍi,
gurumantramalayānilanu nijavāsaneviḍidu bīsuttiralu,
jīva suṣuptibhrāntiyaḷidu,
paramajāgratsvarūpanappa paramātmanāgi,
tanuvina jāgra, manada svapnagaḷaḷidu,
paramana madhyāvastheyalli līnamāgalu,
aṣṭabhūtaṅgaḷuṁ aṣṭāvaraṇaṅgaḷādavadentendoḍe:
Pr̥thviyē bhasmavu, jalavē pādōdakavu,
agniyē rudrākṣavu, vāyuvē prasādavu,
ākāśavē mantravu, ahaṅkāravē liṅgavu,
mahavē guruvu, cittavē jaṅgamavu,
nijavu prasannamāgi manavē vr̥ṣabhēśvaranāgi
tanuvē kailāsaparvatamāgi
sakala guṇaṅgaḷē śivagaṇaṅgaḷāgi;
sakalajanmakarmaprapan̄caparadoḷaḍagittentendoḍe
kāladalli brahmāṇḍaṅgaḷaḍagi rūpudōradirpante,
cidākāśadalli līnamāge, tānē śivanāgi,
abhēda brahmavāyittentendoḍe:
Vastusvarūpamāda suvarṇava kāsi, karagisi;
Uḷida nijamaṁ tegedu,
beḷugāra mikki, mahadoḷage berasi,
eraḍannū ondumāḍi,
tānadaroḷage beredu bhēdadōradirpante,
manas'su jīva paramaranondumāḍi,
tānadaroḷage beredu,
bhēdadōradirpude liṅgaikya kāṇā.
Mahāghana doḍḍadēśikāryaguruprabhuve.