ಗುರುವೇ, ನಿನ್ನ ಕರದಲ್ಲೆನ್ನಂ ಪುಟ್ಟಿಸಿ,
ಮಂತ್ರವೆಂಬ ಜನನಿಯ ವಿವೇಕವೆಂಬ ಸ್ತನಗಳೊಳ್ ತುಂಬಿರ್ಪ
ಅನುಭವಾಮೃತರಸವನೆರೆದು, ಆಚಾರಕ್ಷೇತ್ರದಲ್ಲಿ ಬೆಳೆಸುತ್ತಿರಲು,
ಅನೇಕ ಕಳೆಗಳಿಂ ಕೂಡಿದ ದಿವ್ಯಜ್ಞಾನವೆಂಬ ಯೌವನಂ ಪ್ರಾದುರ್ಭವಿಸಿ,
ಸತ್ಕರ್ಮವಾಸನೆಯಿಂ ಪೋಷಿತನಾಗಿರ್ಪೆನಗೆ ಮಹಾಲಿಂಗಮೊಲಿದು,
ನಿನ್ನ ಭಾವದಲ್ಲಿ ಬಂದು, ಹೃದಯದಲ್ಲಿ ನಿಂದು ಕೇಳಲು,
ನೀನು ಆ ಲಿಂಗಕ್ಕೆ ಮಂಗಳಸೂತ್ರಮಂ ಕಟ್ಟಿ,
ಕಲಶಕನ್ನಡಿಗಳನ್ನಿಕ್ಕಿ ಪಾಣಿಗ್ರಹಣಮಂ ಮಾಡಿ ಕೊಟ್ಟಬಳಿಕ,
ರತಿಯನನುಭವಿಸಿ, ಲಿಂಗಸುಖವಂ ತನಗೀವುತ್ತಿರ್ಪನಯ್ಯಾ.
ಆ ಮೇಲೆ ತನ್ನ ಮನದ ಹೆದರಿಕೆಯಂ ಬಿಡಿಸಿ,
ಅಂತರಂಗಕ್ಕೆ ಕರೆದುಕೊಂಡುಬಂದು,
ನಿಜಪ್ರಸಾದ ರಸದಂಬುಲವಿತ್ತು,
ತನ್ನೊಡನೆ ಕೂಡುವ ಚಾತುರ್ಯಮಾರ್ಗಂಗಳಂ ಕಲಿಸುತ್ತ,
ಆ ಲಿಂಗಂ ತಾನೇ ತನಗೆ ಗುರುವಾದನಯ್ಯಾ.
ಆ ಮೇಲೆ ಭಾವದಲ್ಲಿ ನನ್ನ ಕೂಡಣ ಚಲ್ಲಾಟದಿಂದ ಸಂಚರಿಸುತ್ತಾ,
ತಾನೇ ಜಂಗಮವಾದನಯ್ಯಾ.
ತನ್ನ ಭಾವದಲ್ಲಿರ್ಪ ಇಂದ್ರಿಯವಿಷಯಂಗಳೆಲ್ಲಾ
ಪುಣ್ಯಕ್ಷೇತ್ರಂಗಳಾದವಯ್ಯಾ.
ಶರೀರವೇ ವಿಶ್ವವಾಯಿತ್ತಯ್ಯಾ, ತಾನೇ ವಿಶ್ವನಾಥನಯ್ಯಾ.
ಪಂಚಭೂತಂಗಳೇ ಪಂಚಕೋಶವಾಯಿತ್ತಯ್ಯಾ.
ಆ ಲಿಂಗಾನಂದವೇ ಭಾಗೀರಥಿಯಾಯಿತ್ತಯ್ಯಾ.
ಆ ಲಿಂಗದೊಳಗಣ ವಿನಯವೇ ಸರಸ್ವತಿಯಾಗಿ,
ಆ ಲಿಂಗದ ಕರುಣವೇ ಯಮುನೆಯಾಗಿ,
ತನ್ನ ಶರೀರವೆಂಬ ದಿವ್ಯ ಕಾಶೀಕ್ಷೇತ್ರದಲ್ಲಿ
ಹೃದಯವೆಂಬ ತ್ರಿವೇಣೀ ಮಣಿಕರ್ಣಿಕಾಸ್ಥಾನದಲ್ಲಿ ನೆಲಸಿ,
ಸಕಲ ಗುಣಂಗಳೆಂಬ ಪುರುಷ ಋಷಿಗಳಿಂದ ಅರ್ಚಿಸಿಕೊಳ್ಳುತ್ತಾ
ನಮ್ಮೊಳಗೆ ನಲಿದಾಡುತ್ತಿರ್ದನಯ್ಯಾ.
ತನ್ನ ನಿಜಮತದಿಂ ವಿಶ್ವಸ್ವರೂಪ ಕಾಶೀಕ್ಷೇತ್ರವನು ರಕ್ಷಿಸುತಿರ್ಪ
ಅನ್ನಪೂರ್ಣಾಭವಾನಿಗೂ ತನಗೂ ಮತ್ಸರಮಂ ಬಿಡಿಸಿ,
ತನಗೆ ಅನ್ನಪೂರ್ಣಭವಾನಿಯೇ ಆಸ್ಪದಮಾಗಿ,
ಆ ಅನ್ನಪೂರ್ಣೆಗೆ ತಾನೇ ಆಸ್ಪದಮಾಗಿರ್ಪಂತನುಕೂಲವಿಟ್ಟು
ನಡಿಸಿದನಯ್ಯಾ.
ಇಂತಪ್ಪ ದಿವ್ಯಕ್ಷೇತ್ರದಲ್ಲಿ ನಿಶ್ಚಿಂತಮಾಗಿ
ಆ ಪರಮನೊಳಗೆ ಅಂತರಂಗದರಮನೆಯಲ್ಲಿ
ನಿರ್ವಾಣರತಿಸುಖವನನುಭವಿಸುತ್ತಾ
ಆ ಲಿಂಗದಲ್ಲಿ ಲೀನಮಾಗಿ ಪುನರಾವೃತ್ತಿರಹಿತ
ಶಾಶ್ವತ ಪರಮಾನಂದರತಿಸುಖದೊಳೋಲಾಡುತ್ತಿರ್ದೆನಯ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.