ಗುರುವೇ, ನೀನು ನನ್ನ ಲಿಂಗಕ್ಕೆ
ಮಂಗಳಸೂತ್ರವಂ ಕಟ್ಟಿ ಕೊಟ್ಟಂದಿಂದ
ಅನ್ಯವನರಿಯದೆ, ಆ ಲಿಂಗದಲ್ಲೇ ನಡೆವುತ್ತಿರ್ಪೆನು,
ಆ ಲಿಂಗದಲ್ಲೇ ನುಡಿವುತ್ತಿರ್ಪೆನು,
ಆ ಲಿಂಗದ ನಟನೆಯಂ ನೆನವುತ್ತಿರ್ಪೆನು,
ಆ ಲಿಂಗದ ಮಹಿಮೆಯನೆ ಪಾಡುತ್ತಿರ್ಪೆನು,
ಆ ಲಿಂಗವನೆ ಬೇಡುತ್ತಿರ್ಪೆನು, ಆ ಲಿಂಗವನೆ ಕಾಡುತ್ತಿರ್ಪೆನು,
ಆ ಲಿಂಗವನೆ ಕೊಸರುತ್ತಿರ್ಪೆನು, ಆ ಲಿಂಗವನೆ ಅರಸುತ್ತಿರ್ಪೆನು,
ಆ ಲಿಂಗವನೆ ಬೆರಸುತ್ತಿರ್ಪೆನು, ಆ ಲಿಂಗವಲ್ಲದೆ ಮತ್ತಾರನೂ ಕಾಣೆನು,
ಮತ್ತಾರಮಾತನೂ ಕೇಳೆನು, ಮತ್ತಾರನೂ ಮುಟ್ಟೆನು,
ಮತ್ತಾರನೂ ತಟ್ಟೆನು.
ಲಿಂಗವು ನಾನು ಇಬ್ಬರೂ ಇಲ್ಲದ ಕಾರಣ
ಎಲ್ಲವೂ ನನಗೆ ಏಕಾಂತಸ್ಥಾನವಾಯಿತ್ತು.
ಎಲ್ಲೆಲ್ಲಿಯೂ ಯಾವಾಗಲೂ ಎಡೆವಿಡದೆ ಲಿಂಗದಲ್ಲೇ ರಮಿಸುತಿರ್ದೆನು.
ಲಿಂಗದಲ್ಲೇ ಕಾಲವ ಕ್ರಮಿಸುತ್ತಿರ್ದೆನು
ಲಿಂಗದಲ್ಲೇ ಎನ್ನಂಗಗುಣಂಗಳಂ ಕ್ಷಮಿಸುತ್ತಿರ್ದೆನು
ಲಿಂಗದೊಳಗೆ ನನ್ನ, ನನ್ನೊಳು ಲಿಂಗದ ಚಲ್ಲಾಟವಲ್ಲದೆ,
ಬೇರೊಂದು ವಸ್ತುವೆನಗೆ ತೋರಲಿಲ್ಲ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.