Index   ವಚನ - 20    Search  
 
ಪೃಥ್ವಿಗೆ ಮೈಯೆಲ್ಲಾ ಯೋನಿ, ಜಲಕ್ಕೆ ಶರೀರವೆಲ್ಲಾ ಕಾಲು, ಅಗ್ನಿಗೆ ಶರೀರವೆಲ್ಲಾ ಬಾಯಿ, ವಾಯುವಿಗೆ ತನುವೆಲ್ಲಾ ಮೂಗು, ಆಕಾಶಕ್ಕೆ ಕಾಯವೆಲ್ಲಾ ಹೊಟ್ಟೆ, ಆತ್ಮನಿಗೆ ಮೈಯೆಲ್ಲಾ ಕಣ್ಣು, ಪೃಥ್ವಿಗೆ ಘ್ರಾಣವೇ ಇಂದ್ರಿಯ, ಗಂಧವೇ ವಿಷಯ. ಜಲಕ್ಕೆ ಜಿಹ್ವೆಯೇ ಇಂದ್ರಿಯ, ರುಚಿಯೇ ವಿಷಯ. ಅಗ್ನಿಗೆ ನೇತ್ರವೇ ಇಂದ್ರಿಯ, ರೂಪೇ ವಿಷಯ. ವಾಯುವಿಗೆ ತ್ವಕ್ಕೇ ಇಂದ್ರಿಯ, ಸ್ಪರ್ಶನವೇ ವಿಷಯ. ಆಕಾಶಕ್ಕೆ ಶ್ರೋತ್ರವೇ ಇಂದ್ರಿಯ, ಶಬ್ದವೇ ವಿಷಯ. ಆತ್ಮನಿಗೆ ಮನಸ್ಸೇ ಇಂದ್ರಿಯ, ಭಾವವೇ ವಿಷಯ. ಪೃಥ್ವಿಯಲ್ಲಿರ್ಪ ಗಂಧಕ್ಕೆ ಘ್ರಾಣೇಂದ್ರಿಯವೇ ಕಾರಣಮಾಯಿತ್ತು. ಜಲದೊಳಗಿರ್ಪ ರುಚಿಗೆ ಜಿಹ್ವೇಂದ್ರಿಯದಲ್ಲಿರ್ಪ ಅಗ್ನಿಯೇ ಕಾರಣಮಾಯಿತ್ತು ಅಗ್ನಿಯಲ್ಲಿರ್ಪ ರೂಪಿಗೆ ನೇತ್ರೇಂದ್ರಿಯದಲ್ಲಿರ್ಪ ಜಲಮೆ ಕಾರಣಮಾಯಿತ್ತು. ವಾಯುವಿನೊಳಗಿರ್ಪ ಸ್ಪರುಶನಕ್ಕೆ ತ್ವಗೀಂದ್ರಿಯದಲ್ಲಿರ್ಪ ಪೃಥ್ವಿಯೇ ಕಾರಣಮಾಯಿತ್ತು. ಆಕಾಶದಲ್ಲಿರ್ಪ ಶಬ್ದಕ್ಕೆ ಶ್ರೋತ್ರೇಂದ್ರಿಯದಲ್ಲಿರ್ಪ ಆತ್ಮನೇ ಕಾರಣಮಾಯಿತ್ತು. ಆತ್ಮನಲ್ಲಿರ್ಪ ಭಾವಕ್ಕೆ ಹೃದಯೇಂದ್ರಿಯದಲ್ಲಿರ್ಪ ಆಕಾಶಮೇ ಕಾರಣಮಾಯಿತ್ತು. ಇಂತಪ್ಪ ಭಾವದಲ್ಲಿ ಜ್ಞಾನಶಕ್ತಿ ಹುಟ್ಟಲು, ಮನವೇ ಮಹಾಲಿಂಗವಾಯಿತ್ತು. ಶಬ್ದದಲ್ಲಿ ಪರಾಶಕ್ತಿ ಹುಟ್ಟಲು, ಶ್ರೋತ್ರವೇ ಪ್ರಸಾದಲಿಂಗಮಾಯಿತ್ತು. ಸ್ಪರ್ಶನದಲ್ಲಿ ಆದಿಶಕ್ತಿ ಹುಟ್ಟಲು, ಘ್ರಾಣವೇ ಆಚಾರಲಿಂಗಮಾಯಿತ್ತು. ಗ್ರಹಿಸುವುದೇ ಜ್ಞಾನೇಂದ್ರಿಯಮಾಯಿತ್ತು; ಬಿಡುವುದೇ ಕರ್ಮೇಂದ್ರಿಯಮಾಯಿತ್ತು. ಇಂತಪ್ಪ ಇಂದ್ರಿಯಂಗಳೆಲ್ಲಾ ಲಿಂಗಸ್ವರೂಪಗಳಾಗಿ, ವಿಷಯಂಗಳೇ ಶಕ್ತಿಸ್ವರೂಪಮಾದ ಮಹಾಪುರುಷನಸ್ವರೂಪಿನಲ್ಲಿ ಇಷ್ಟಲಿಂಗವು ನೆಲೆಗೊಂಡಲ್ಲಿ, ಆ ಲಿಂಗದ ಮೋಹವೇ ಪ್ರಾಣಲಿಂಗಮಾಯಿತ್ತು, ಆ ಲಿಂಗದ ವಿಚಾರವೇ ಭಾವಲಿಂಗಮಾಯಿತ್ತು. ಭೂತಂಗಳೇ ಲಿಂಗಕ್ಕೆ ಅಂತರಂಗಂಗಳಾದವು. ಅಲ್ಲಲ್ಲಿರ್ಪ ಲಿಂಗಂಗಳೇ ಭೂತಂಗಳಿಗೆ ಚೈತನ್ಯಮಾದ ಪ್ರಾಣಂಗಳಾಗಿ, ಆ ಲಿಂಗಂಗಳೇ ಶರಣನಂಗಂಗಳಾಗಿ, ಲಿಂಗಂಗಳೇ ಶಿವನಾಗಿ, ಶರಣನೇ ಸತಿ ಲಿಂಗವೇ ಪತಿಯಾಗಿ, ಇಬ್ಬರ ಸಮರಸಭಾವವೇ ಪರಮಾನಂದರತಿಸುಖಮಾಗಿ, ಆ ಸುಖದಲ್ಲಿ ಎರಡಂ ಏಕಮಾಗಿ ಭೇದದೋರದೆ ನಿಶ್ಶಬ್ದಬ್ರಹ್ಮವಾಗಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.