Index   ವಚನ - 22    Search  
 
ಪೃಥ್ವಿಯೇ ಬಹಿರಂಗ, ಆಕಾಶವೇ ಅಂತರಂಗ, ಆ ಅಂತರಂಗಮಪ್ಪ ಆಕಾಶದಲ್ಲಿ ನೀನಿರ್ಪೆ, ಬಹಿರಂಗಮಪ್ಪ ಪೃಥ್ವಿಯಲ್ಲಿ ನಾನಿರ್ಪೆನು. ಅಂತರಂಗಜ್ಞಾನವು ನಿನಗೆ, ಬಹಿರ್ಜ್ಞಾನವೆನಗೆ. ನೀನು ಅಂತರಂಗದಲ್ಲಿ ಆನಂದಿಸುತ್ತಿರುವೆ, ನಾನು ಬಹಿರಂಗದಲ್ಲಿ ಆನಂದಿಸುತ್ತಿರ್ಪೆನು. ನಿನಗೆ ಅಂತರಂಗಮೇ ನಿಜಮಾಗಿರ್ಪುದು, ಎನಗೆ ಬಹಿರಂಗಮೇ ನಿಜಮಾಗಿರ್ಪುದು, ನೀನು ಅಂತರಂಗದಲ್ಲಿ ನಡೆವುತ್ತಿರ್ಪೆ ನಾನು ಬಹಿರಂಗದಲ್ಲಿ ನಡೆವುತ್ತಿರ್ಪೆನು. ಅಂತರಂಗದಲ್ಲಿ ನೋಟವು ನಿನಗೆ, ಬಹಿರಂಗದಲ್ಲಿ ನೋಟವೆನಗೆ. ನಿನ್ನ ಸತ್ಯವೆನ್ನ ಬಹಿರಂಗವನಾವರಿಸಿ, ನನ್ನಂ ಮೋಹಿಸುತ್ತಿರ್ಪುದು. ನನ್ನ ಮನವು ನಿನ್ನ ಅಂತರಂಗವನಾವರಿಸಿ, ನಿನಗೆ ಆಗ್ರಹವಂ ಪುಟ್ಟಿಸುತ್ತಿಹುದು. ನಿನಗೆ ಅಂತಶ್ಶಕ್ತಿಯಾದ ಕಾರಣ ನನ್ನ ತಮಸ್ಸನ್ನು ನಿನ್ನ ಕೈವಶಮಾಡಿಕೊಂಡು, ಅದರಿಂದಲೇ ನನ್ನಂ ಸಂಹರಿಸುತ್ತಿರುವೆ. ನನಗೆ ಶಕ್ತಿಬಾಹ್ಯವಾದಕಾರಣ ನಿನ್ನ ಸತ್ವಗುಣವಂ ನಾನು ಪರಿಗ್ರಹಿಸಲಾರದೆ, ಲಯವನೈಯ್ದುತ್ತಿರ್ಪ ಸಕೀಲವನ್ನು ನಿನ್ನಿಂದ ನಾನು ಕಂಡಲ್ಲಿ, ನಿನಗೆ ಅಂತರಂಗವಾಗಿರ್ಪವನು ನಾನೆಂದು ನೀನು ಕಂಡಿರಯ್ಯಾ. ಬಹಿರಂಗದಲ್ಲಿ ನೀನು ಎನಗೆ ಆಧಾರಮಾದಲ್ಲಿ, ಅಂತರಂಗದಲ್ಲಿ ನಿನಗೆ ನಾನೇ ಆಧಾರಮಾದೆನಯ್ಯಾ. ಬಹಿರಂಗದಲ್ಲಿ ನೀನೆನಗೆ ಶಕ್ತಿಯಾದಲ್ಲಿ, ಅಂತರಂಗದಲ್ಲಿ ನಿನಗೆ ನಾನೇ ಶಕ್ತಿಯಾದೆನಯ್ಯಾ. ತಮೋಗುಣವಂ ಪಿಡಿದು ನನ್ನಂ ನೀನಾಡಿಸಿದೊಡೆ, ಸತ್ವಗುಣವಂ ಪಿಡಿದು ನಿನ್ನಂ ನಾನಾಡಿಸುತ್ತಿರ್ಪೆನಯ್ಯಾ. ಕರ್ಪುರವಪ್ಪಿದುರಿಯಾದೆ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.