Index   ವಚನ - 21    Search  
 
ಗಣನಾತೀತನಪ್ಪ ಪರಮೇಶ್ವರನು ಲೀಲಾನಿಮಿತ್ತ ಗಣನೆಗೆ ಬಂದಲ್ಲಿ, ವಿಷಮಗಣನೆಯೇ ಶಿವನಾಯಿತ್ತು, ಸಮಗಣನೆಯೇ ಶಕ್ತಿಯಾಯಿತ್ತು. ಅವೇ ಇಂದ್ರಿಯಂಗಳಲ್ಲಿ ಬೆರೆದು, ನಾಲ್ವತ್ತೈದು ತತ್ವಂಗಳಾಯಿತ್ತು. ಆ ಶಿವಶಕ್ತಿಗಳ ಹೆಚ್ಚಿಗೆಯಲ್ಲಿ ಒಂದು ಶೂನ್ಯವು ಹುಟ್ಟಿ, ತಚ್ಛೂನ್ಯದಲ್ಲಿ ಬೆರದ ಶಿವಶಕ್ತಿಗಳೇ ಅನಂತಗುಣಿತಂಗಳಾಗಿ ಹೆಚ್ಚುತ್ತಿರಲು, ಅಲ್ಲಿ ಕಾಲ ಕರ್ಮ ಸೃಷ್ಟಿ ಸ್ಥಿತಿ ಸಂಹಾರಾದಿ ಪ್ರಪಂಚಂಗಳುದಿಸಿ, ಅಲ್ಲಿಯೇ ತೋರುತ್ತಾ ಅಡಗುತ್ತಾ ತೊಳಲುತಿರ್ಪುವು ನೋಡಾ. ಇಂತಪ್ಪ ಪರಮಾತ್ಮನ ಲೀಲಾಶಕ್ತಿಯನ್ನು ಗುರುಮುಖದಿಂದ ತಿಳಿದ ಮಹಿಮನು ಶೂನ್ಯವಶೂನ್ಯಮಾಡಲು, ಶಿವಶಕ್ತಿಸ್ವರೂಪಮಾದ ಗಣನೆ ನಿಂದಿತ್ತು. ಅಂತಪ್ಪ ಇಂದ್ರಿಯವಿಷಯಸ್ವರೂಪಮಾದ ಗಣನೆಯನ್ನು ತದ್ಗಣನೆಯಿಂದ ಕಳೆಯಲು, ಉಳಿದ ನಿಜಂ ತಾನೊಂದೇ ನಿಂದಲ್ಲಿ ತಾನೇ ಪರಮಾತ್ಮನಾಯಿತ್ತು. ಇಂತಪ್ಪ ಸಕೀಲವು ತನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.