Index   ವಚನ - 23    Search  
 
ಜಿಹ್ವೆಯಲ್ಲಿ ಮೃತ್ಯುವೂ, ನೇತ್ರದಲ್ಲಿ ಕಾಲನೂ ಇರಲು, ನಾಸಿಕದಲ್ಲಿರ್ಪ ಪ್ರಾಣನಿಗೆ ಬದುಕುಂಟೇನಯ್ಯಾ? ನೇತ್ರದಲ್ಲಿ ಉನ್ಮೀಲನ ನಿವಿೂಲನವೇ ಕಾಲಸ್ವರೂಪಮಾಯಿತ್ತು. ಜಿಹ್ವೆಯ ಲಂಪಟವೇ ಮೃತ್ಯುಸ್ವರೂಪಮಾಯಿತ್ತು. ಮೃತ್ಯುಸ್ವರೂಪಮಾದ ಜಿಹ್ವೆಯಲ್ಲಿ ಸಕಲವನ್ನೂ ಸಂಹರಿಸಿ, ನರಕಕ್ಕೆ ಹಾಕುತ್ತಿರಲು, ತತ್ಸಂಹಾರದಲ್ಲಿ ಅನೇಕ ವ್ಯಾಧಿಪೀಡೆಗಳುದ್ಭವಿಸಿ, ಕಾಲನಲ್ಲಿ ಜೀವನಂ ಕಾಡಿ ಕಂಗೆಡಿಸಿ ಸಂಹರಿಸಿ, ಮೃತ್ಯುವಿಗೆ ತುತ್ತುಮಾಡಿಕೊಡುತ್ತಿರ್ದನಯ್ಯಾ. ಇಂತು ಕಾಲಮೃತ್ಯುಗಳ ಬಾಧೆಯಲ್ಲಿ ಕಳವಳಿಸಿ ಸತ್ತು ಹುಟ್ಟುತ್ತಿರುವ ನನಗೆ ಮಹಾಗುರುವೇ ನೀನು ಅಂಜಬೇಡವೆಂದು ಅಭಯಕರಮಂ ನನ್ನ ಶಿರದಮೇಲಿಟ್ಟು, ಕರ್ಣದಲ್ಲಿ ಮಂತ್ರೋಪದೇಶಮಂ ಮಾಡಿ, ಕರದಲ್ಲಿ ಮಹಾಲಿಂಗಮಂ ಕೊಟ್ಟು ರಕ್ಷಿಸಿದಲ್ಲಿ, ಆ ಕಾಲಸಂಹಾರಕನಪ್ಪ ಲಿಂಗಮಂ ನೋಡಿ, ಕಂಗಳಲ್ಲಿರ್ಪ ಕಾಲನಂ ಜೈಸಿದೆನಯ್ಯಾ. ನೀನು ಉಪದೇಶವಿತ್ತ ಆ ಶಿವಮಂತ್ರವಂ ಜಪಿಸಿ ಜಪಿಸಿ, ಜಿಹ್ವೆಯಲ್ಲಿರ್ಪ ಮೃತ್ಯುವಂ ಜಯಿಸಿದೆನಯ್ಯಾ. ಕಾಲಮೃತ್ಯುಗಳಂ ಜಯಿಸಲು, ವ್ಯಾಧಿಪೀಡೆಗಳು ಲಯವಾದವಯ್ಯಾ, ನರಕವು ಹಾಳಾಯಿತಯ್ಯಾ. ಜೀವನು ಭಯಭ್ರಾಂತಿಗಳನಳಿದು, ಪರಮಶಾಂತಿಯಂ ಹೊಂದಿ, ಲಿಂಗಾನಂದದೊಳಗೆ ಲೀನನಾದೆನಯ್ಯಾ ನಿನ್ನದಯೆಯಿಂ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.