ನಿನ್ನ ಕಂಗಳಭ್ರಮೆಯೇ ಕಾಲರೂಪಮಾಗಿ
ನನ್ನಂ ಭವಭವಂಗಳಲ್ಲಿ ತೊಳಲಿಸಿ ಬಳಲಿಸುತ್ತಿತ್ತಯ್ಯಾ.
ನಿನ್ನಾನಂದಾಶ್ರುವೇ ದೇವತೆಗಳಿಗೆ ಅಮೃತಮಾಗಿ,
ಮನುಷ್ಯರಿಗೆ ಜೀವನವಾಗಿ ರಕ್ಷಿಸುತ್ತಿತ್ತಯ್ಯಾ.
ನಿನ್ನ ಕಂಗಳ ಕೋಪಾಗ್ನಿಯೇ ಸಂಹರಿಸುತ್ತಿತ್ತಯ್ಯಾ,
ನಿನ್ನ ಕಂಗಳ ಭಾವವೇ ಪಲತೆರಮಾಗಿ ಸೃಷ್ಟಿಸುತ್ತಿತ್ತಯ್ಯಾ.
ಇಂತಪ್ಪ ನಿನ್ನ ಕಂಗಳ ವಿಕಾಸವನ್ನು ಕಡೆಹಾಯ್ದು
ನಿನ್ನ ಕೂಡುವ ಪರಿಯೆಂತಯ್ಯಾ.
ಆದರೆ, ಸ್ಥೂಲದಲ್ಲಿ ನಿನ್ನಲ್ಲಿರ್ಪ ಸಕಲವಿಚಿತ್ರವನ್ನು ಸೂಕ್ಷ್ಮದಲ್ಲಿ ನಿನ್ನಲ್ಲಿಟ್ಟು,
ನೀನು ನನ್ನಂ ಸೃಷ್ಟಿಸಿ, ನನಗೆ ನೀನೇ ಆಧಾರಮಾಗಿ,
ನಿನಗೆ ನಾನೇ ಆಧಾರಮಾಗಿ, ನಿನ್ನ ನೋಟವೂ,
ನನ್ನ ನೋಟವೂ ಏಕಮಾಗಲು,
ಪ್ರಪಂಚವು ಕಾಣಬರುತ್ತಿರಲಾಗಾ ವಿಚಿತ್ರವನ್ನು
ನನ್ನಲ್ಲಿ ನಾನೇ ತಿಳಿದುನೋಡಿ,
ನಿನ್ನ ಭ್ರೂಮಧ್ಯದಲ್ಲಿ ಜ್ಞಾನಾಕ್ಷಿಯಾಗಿರ್ಪುದೆಂದು ತಿಳಿದು,
ಅದಂ ಮುಚ್ಚಿರ್ಪ ತಾಮಸವೆಂಬ ಕಪ್ಪನ್ನು ಭಾವಹಸ್ತದಲ್ಲಿ
ಮೆಲ್ಲಮೆಲ್ಲಗೆ ಸಾಧಿಸಿ ತೆಗೆಯಲು,
ಆ ಕಂಗಳಲ್ಲಿರ್ಪ ಭ್ರಮೆಯಳಿದು, ಜ್ಞಾನಾಗ್ನಿಯು ಪ್ರಕಾಶಮಾಗಿ,
ಕಾಲ ಕಾಮ ಸೃಷ್ಟಿ ಸ್ಥಿತಿ ಸಂಹಾರ ಸಂಸಾರಪ್ರಪಂಚ
ಶರೀರಾದಿ ಸಕಲ ಭಿನ್ನಗುಣಂಗಳನ್ನು ದಹಿಸಿ,
ಆ ಅಗ್ನಿಯು ನನ್ನಲ್ಲಿಯೇ ಪರಮಶಾಂತಿಯಂ
ಪೊಂದಿದಲ್ಲಿ ನಾನೇ ನೀನಾದೆನಯ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Ninna kaṅgaḷabhrameyē kālarūpamāgi
nannaṁ bhavabhavaṅgaḷalli toḷalisi baḷalisuttittayyā.
Ninnānandāśruvē dēvategaḷige amr̥tamāgi,
manuṣyarige jīvanavāgi rakṣisuttittayyā.
Ninna kaṅgaḷa kōpāgniyē sanharisuttittayyā,
ninna kaṅgaḷa bhāvavē palateramāgi sr̥ṣṭisuttittayyā.
Intappa ninna kaṅgaḷa vikāsavannu kaḍ'̔ehāydu
ninna kūḍuva pariyentayyā.
Ādare, sthūladalli ninnallirpa sakalavicitravannu sūkṣmadalli ninnalliṭṭu,
nīnu nannaṁ sr̥ṣṭisi, nanage nīnē ādhāramāgi,
Ninage nānē ādhāramāgi, ninna nōṭavū,
nanna nōṭavū ēkamāgalu,
prapan̄cavu kāṇabaruttiralāgā vicitravannu
nannalli nānē tiḷidunōḍi,
ninna bhrūmadhyadalli jñānākṣiyāgirpudendu tiḷidu,
adaṁ muccirpa tāmasavemba kappannu bhāvahastadalli
mellamellage sādhisi tegeyalu,
ā kaṅgaḷallirpa bhrameyaḷidu, jñānāgniyu prakāśamāgi,
kāla kāma sr̥ṣṭi sthiti sanhāra sansāraprapan̄ca
śarīrādi sakala bhinnaguṇaṅgaḷannu dahisi,
ā agniyu nannalliyē paramaśāntiyaṁ
pondidalli nānē nīnādenayyā
mahāghana doḍḍadēśikāryaguruprabhuve.