Index   ವಚನ - 26    Search  
 
ಸಪ್ತಧಾತುಗಳೆಂಬ ಸಪ್ತಪ್ರಕಾರಂಗಳಿಂದಲೂ ಶಿರವೆಂಬ ಗೋಪುರದಿಂದಲೂ ಭುಜಗಳೆಂಬ ನಂದಿಯ ಧ್ವಜಂಗಳಿಂದಲೂ ಇಂದ್ರಿಯಮಾರ್ಗಂಗಳೆಂಬ ದ್ವಾರಗಳಿಂದಲೂ ಉನ್ಮೀಲನ ನಿವಿೂಲನಂಗಳೆಂಬ ಕವಾಟಂಗಳಿಂದಲೂ ಉಪೇತವಾದ ಕಾಯವೆಂಬ ಶಿವಾಲಯದಲ್ಲಿ ಮನವೆಂಬ ಗರ್ಭಗೃಹದೊಳಗೆ ಜ್ಞಾನಪೀಠದಲ್ಲಿ ಅಷ್ಟಾವರಣವೆಂಬಷ್ಟಬಂಧನದಿಂ ಭಾವಲಿಂಗದೊಳಗಿಂಬಿಟ್ಟು, ಆನಂದಜಲದಿಂದಭಿಷೇಕವಂ ಮಾಡಿ, ಅಂಗದೇಶದಲ್ಲಿ ಬೆರದ ಸುವಾಸನೆವಿಡಿದ ನಾನಾಗುಣಂಗಳೆಂಬ ದಿವ್ಯ ಕುಸುಮಂಗಳಂ ತಂದು ಸಮರ್ಪಿಸಿ, ವೈರಾಗ್ಯವೆಂಬ ಶಿಲೆಯೊಳಗೆ ದೇಹಧರ್ಮವೆಂಬ ಗಂಧದ ಕೊರಡಂ ತೇದು, ಅದರ ಸಮೇತ ದಿವ್ಯವಾಸನೆವಿಡಿದ ಪರಮಶಾಂತಿಯೆಂಬ ಗಂಧವನ್ನು ಶಿವಮಂತ್ರವೆಂಬ ಅಕ್ಷತೆಯೊಳಗೆ ಕೂಡಿಸಿ ಸಮರ್ಪಿಸಿ, ಸ್ವಭಾವವಾಸನೆಯುಳ್ಳ ಕರಣಂಗಳೆಂಬ ಪಲತೆರದ ಧೂಪಂಗಳಂ ತಂದು, ಜ್ಞಾನಾಗ್ನಿಯಲ್ಲಿ ಹಾಕಿ, ಧೂಪವಾಸನೆಯಂ ಸಮರ್ಪಿಸಿ, ತತ್ವವೆಂಬ ಬತ್ತಿಯನ್ನು ನಿಜಸುಖತೈಲದೊಳಗೆ ಬೆರಸಿ, ವೇದಾರ್ಥವೆಂಬ ಪಾತ್ರೆಯೊಳಗಿಟ್ಟು, ಸ್ವಯಂಪ್ರಕಾಶವಾದ ಜ್ಯೋತಿಯನ್ನು ಹೊತ್ತಿಸಿ, ಮಂಗಳಾರತಿಯಂ ಬೆಳಗಿ, ನಿರುಪಾಧಿಕ ಮಹಾಪ್ರಣವ ಘೋಷವೆಂಬ ಘಂಟೆಯಂ ಧ್ವನಿಗೈದು, ಭಕ್ತಿಯೆಂಬ ನೇಪಥ್ಯಮಂ ಕಟ್ಟಿ, ಅರಿವೆಂಬ ಪಾತ್ರೆಯಲ್ಲಿ ಜ್ಞಾನಾಗ್ನಿಯಲ್ಲಿ ಪರಿಪಕ್ವಮಾದ ವಿಷಯಪದಾರ್ಥಂಗಳನಿಟ್ಟು, ಬಿಂದುಕಳೆಗಳೆಂಬ ಘೃತಸೂಪಂಗಳಿಂ ಪ್ರಕಾಶಿಸುತ್ತಿರ್ಪ ತಾನೆಂಬ ನಿಜಪ್ರಸಾದವನ್ನು ಧ್ಯಾನಹಸ್ತದಿಂ ಪಿಡಿದು ಆತ್ಮಲಿಂಗಕ್ಕೆ ಸಮರ್ಪಿಸಲು, ಸದಾಶಿವನು ಪ್ರಸನ್ನನಾಗಿ ಸಕಲ ಗಣತಿಂತಿಣಿಯೊಡನೆ ಕೂಡಿ, ನಿಜಶಕ್ತಿಯಿಂ ಯುಕ್ತನಾಗಿ ಆರೋಗಣೆಯಂ ಮಾಡಿ, ತೃಪ್ತಿಸ್ಥಾನದೊಳಗಿಂಬಿಟ್ಟುದೇ ಲಿಂಗೈಕ್ಯವು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.