ವಿರಾಡ್ರೂಪನಾದ ಗುರುವೇ
ನೀನು ನಿನ್ನ ಬ್ರಹ್ಮಾಂಡಸ್ವರೂಪವನೆನ್ನ
ಪಿಂಡಾಂಡಸ್ವರೂಪವಂ ಮಾಡಿ, ನನ್ನಂ ನಿರ್ಮಿಸಿದಲ್ಲಿ,
ನಿನ್ನ ನಾಭಿಯಿಂದ ಕೆಳಗೆ ಶೂದ್ರತ್ವವೂ, ಗರ್ಭದಲ್ಲಿ ವೈಶ್ಯತ್ವವೂ,
ಭುಜದಲ್ಲಿ ಕ್ಷತ್ರಿಯತ್ವವೂ, ಮುಖದಲ್ಲಿ ಬ್ರಾಹ್ಮಣತ್ವವೂ
ನೆಲೆಗೊಂಡಿತೆಂತೆಂದೊಡೆ:
ನಾಭಿಯಿಂದ ಕೆಳಗೆ ಪಾದಂಗಳಾಧಾರನಾಗಿ,
ಉರುಗಳ ಮಧ್ಯದಲ್ಲಿ ಬೀಜದ ಮೂಡೆಗಳನ್ನಿಟ್ಟುಕೊಂಡು,
ನೇಗಿಲ ಮೊನೆಯಲ್ಲಿ ಭೂಮಿಯನುತ್ತು ಬಿತ್ತಿ,
ತಾನೇ ಸೃಷ್ಟಿಸಿದ ಫಲಂಗಳಿಂದ
ತನಗೂ ಸಕಲ ಜಗಕ್ಕೂ ಆಧಾರಮಾಡುತ್ತಿರ್ಪುದೇ ಶೂದ್ರತ್ವವು.
ಕ್ಷತ್ರಿಯಮುಖದಲ್ಲಿ ಬಂದ ಸಕಲ ಪದಾರ್ಥಗಳನ್ನು ತಾನು ಕೊಂಡು,
ಸಕಲ ಜಗಕ್ಕೂ ಅವರವರಿಗೆ ಬೇಕಾದ ವಸ್ತುಗಳನ್ನೇ ಕೊಡುತ್ತಾ,
ಅದರಲ್ಲಿ ಬಂದ ಸುಖಲಾಭವನ್ನು ಪಡೆಯುತ್ತಾ,
ಮಾರದೆ ನಿಂತ ಕೆಟ್ಟ ವಸ್ತುವನ್ನು
ಅಧೋಮುಖದಲ್ಲಿ ಕೆಡವುತ್ತಿರ್ಪುದೆ ವೈಶ್ಯತ್ವವು.
ಭುಜದಲ್ಲಿ ಸಕಲ ಪದಾರ್ಥಂಗಳನ್ನು ಶಕ್ತಿಯಿಂದ ಸಂಹರಿಸಿ ತಂದು
ಅಗ್ನಿಮುಖದಿಂ ಬ್ರಾಹ್ಮಣರಿಗೆ ಕೊಡುತ್ತಾ,
ಬ್ರಾಹ್ಮಣರ ಮುಖದಿಂ ಸಕಲ ಜಗತ್ತನ್ನು ರಕ್ಷಿಸುತ್ತಾ,
ಸಕಲಲೋಕವಂ ಪೂತವಂ ಮಾಡುತ್ತಾ,
ದಕ್ಷಿಣಮುಖದಲ್ಲಿ ಬ್ರಾಹ್ಮಣರನ್ನೂ,
ಉತ್ತರಮುಖದಲ್ಲಿ ಶೂದ್ರರನ್ನೂ
ರಕ್ಷಿಸುತ್ತಿರ್ಪುದೇ ಕ್ಷತ್ರಿಯತ್ವವು.
ಮುಖದಲ್ಲಿ ವೇದವು ಮಂತ್ರಕ್ಕೆ ತಾನೇ ಮೂಲವಾಗಿ
ಕ್ಷತ್ರಿಯಮುಖದಿಂದ ಕೊಂಡು,
ಸಕಲ ಪದಾರ್ಥಂಗಳನ್ನು ಮಂತ್ರಯುಕ್ತಮಾಗಿ
ಹೃದಯಕುಂಡದಲ್ಲಿರ್ಪ ಅಗ್ನಿಮುಖಕ್ಕೆ ಆಹುತಿಯಂ ಕೊಟ್ಟು,
ತನ್ಮುಖದಲ್ಲಿ ಭೂತಂಗಳನ್ನು ತೃಪ್ತಿಬಡಿಸಿ,
ದೇವತೆಗಳನ್ನು ತೃಪ್ತಿಬಡಿಸುವುದೇ ಬ್ರಾಹ್ಮಣತ್ವವು.
ಅಂತಪ್ಪ ಬ್ರಾಹ್ಮಣಸ್ವೂರಪವೇ ಶಿವನು ಎಂತೆಂದೊಡೆ:
ಪಂಚೇಂದ್ರಿಯಂಗಳೇ ಪಂಚಮುಖಂಗಳಾಗಿ
ಸಕಲವನ್ನೂ ಸಂಹರಿಸುತ್ತಿರ್ಪುದಾದ ಕಾರಣ.
ಭುಜದಲ್ಲಿರ್ಪ ಕ್ಷತ್ರಿಯತ್ವವೇ ವಿಷ್ಣುವು.
ಅದೆಂತೆಂದೊಡೆ:
ಭಿನ್ನವಂ ಸಂಹರಿಸುತ್ತಾ, ನಿಜವಂ ರಕ್ಷಿಸುತ್ತಾ,
ಶಕ್ತಿಗೆ ತಾನೇ ಆಧಾರಮಾಗಿ, ತನಗೆ ಶಕ್ತಿಯೇ ಆಧಾರಮಾಗಿ,
ಶಕ್ತಿಗೂ ತನಗೂ ಭೇದವಿಲ್ಲದಿರ್ಪುದೇ ವಿಷ್ಣುತ್ವವು.
ತನ್ನ ಗರ್ಭದಲ್ಲಿ ಸಕಲವನ್ನೂ ಇಂಬಿಟ್ಟು, ತನ್ನ ಗರ್ಭದಿಂದ
ಸಕಲವನ್ನೂ ಸೃಷ್ಟಿಸುತ್ತಾ,
ಗಮನಾಗಮನ ಸೃಷ್ಟಿ ನರಕಂಗಳೆಂಬ
ಚತುರ್ಮುಖಗಳುಳ್ಳುದೇ ಬ್ರಹ್ಮತ್ವವು.
ನಾಭಿಯಿಂದ ಕೆಳಗೆ ಇಂದ್ರತ್ವವೆಂತೆಂದೊಡೆ:
ಸಕಲ ಭೋಗಕ್ಕೂ ತಾನೇ ಕರ್ತೃವಾಗಿ,
ಶರೀರವೆಲ್ಲಾ ಯೋನಿರೂಪವಾಗಿ,
ಅಷ್ಟಭೋಗಂಗಳೆಂಬ ಅಷ್ಟದಿಕ್ಕುಗಳನ್ನು ಪಾಲಿಸುತ್ತಾ,
ಆ ಬ್ರಾಹ್ಮಣರು ಅಗ್ನಿಗೆ ಆಹುತಿಗೊಟ್ಟ ಹವಿಸ್ಸನ್ನೇ
ಬಿಂದುರೂಪಮಂ ಮಾಡಿ ಪೃಥ್ವಿಯಲ್ಲಿ ವರ್ಷಿಸುತ್ತಾ,
ಸಕಲ ಗುಣರೂಪಮಾದ ದೇವತರುವು ತನ್ನನಾಶ್ರಯಿಸುತ್ತಿರಲು,
ಅವೆಲ್ಲಕ್ಕೂ ತಾನೇ ಕರ್ತೃವಾಗಿಹುದೇ ಇಂದ್ರತ್ವವು.
ಇಂತಪ್ಪ ಬ್ರಹ್ಮಾಂಡಕ್ಕೂ ಪಿಂಡಾಂಡಕ್ಕೂ ಭೇದದೋರದೆ ಇರಲಾಗಿ,
ನಿನಗೂ ನನಗೂ ಭೇದವುಂಟೇನಯ್ಯಾ?
ಏನೆಂದೊಡೆ, ನೀನು ಮಹವಾಗಿ ನಾನು ಸ್ವಲ್ಪವಾಗಿರ್ಪುದು
ಕೊರತೆಯಲ್ಲದೆ, ನಾನು ಮಹವಾದಲ್ಲಿ ನಾನೇ ನೀನಪ್ಪೆನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.