Index   ವಚನ - 27    Search  
 
ನಿನ್ನ ಕಂಗಳಲ್ಲಿ ಕಾಲಮೃತ್ಯುಗಳುದಿಸಿದವಯ್ಯಾ. ಅವರಲ್ಲಿ ನಾನಾ ವ್ಯಾಧಿಗಳು ಪುಟ್ಟಿದವಯ್ಯಾ. ನಿನ್ನ ಶಕ್ತಿಯಲ್ಲಿ ಕಾಮರತಿಗಳು ಹುಟ್ಟಿದವಯ್ಯಾ. ಅವುಗಳಲ್ಲಿ ಮಾಯಾಪ್ರಪಂಚಗಳು ಹುಟ್ಟಿದವಯ್ಯಾ. ಇವೆಲ್ಲವೂ ಸ್ಥೂಲಸೂಕ್ಷ್ಮಂಗಳನಾವರಿಸಿ, ಆ ಮಾಯೆಯು ನಿರಾಕಾರಮಾಗಿರ್ಪ ಮನವಂ ಕರಗಿಸಿ, ತದ್ಬಿಂದುವಿನಿಂದ ಪೃಥ್ವೀಮುಖದಲ್ಲಿ ಸಾಕಾರವಮಾಡಿ ತೋರುತಿರ್ದವಯ್ಯಾ. ವ್ಯಾಧಿಗಳು ತನುವಂ ಕರಗಿಸಿ ಆಕಾಶಮುಖದಲ್ಲಿ ನಿರಾಕಾರವಂ ಮಾಡಿ ಆಡುತ್ತಿರ್ದವಯ್ಯಾ. ಪ್ರಪಂಚಯುಕ್ತಮಾದ ಕಾಮಸಹಿತಮಾಗಿ ಮುಂದೆ ಶಕ್ತಿಯೂ ವ್ಯಾಧಿಯುಕ್ತಮಾದ ಕಾಮಸಹಿತಮಾಗಿ ಹಿಂದೆ ನೀನೂ ಮಧ್ಯಸ್ಥನಾದ ನನ್ನನ್ನೊತ್ತರಿಸಿ ಚೆಲ್ಲಾಟವಾಡುತ್ತಿರ್ದಿರಯ್ಯಾ. ಗಂಡಹೆಂಡಿರ ಜಗಳದಲ್ಲಿ ಕೂಸುಬಡವಾಯಿತ್ತೆಂಬ ನ್ಯಾಯವೆನಗೆ ತಪ್ಪದಾಯಿತ್ತಯ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.