Index   ವಚನ - 29    Search  
 
ಕರಣಂಗಳೇ ಸ್ಥೂಲರೂಪದ ಶರೀರಮಾಗಿ, ತತ್ಸಂಬಂಧಮಾದ ವಿಷಯಂಗಳೇ ಕಾರಣಸ್ವರೂಪಮಾದ ಮನವಾಗಿ, ಇಂತಪ್ಪ ಶರೀರದಲ್ಲಿ ಧಾತುಗಳೂ, ಮನದಲ್ಲಿ ಗುಣಂಗಳೂ ಹುಟ್ಟಿ, ಧಾತುಗಳು ಗುಣಂಗಳನವಗ್ರಹಿಸಿ, ಗುಣಂಗಳು ಧಾತುಗಳನವಗ್ರಹಿಸಿ, ಧಾತುಗುಣಂಗಳು ಗುಣಧಾತುಗಳೆಂಬ ನಾಲ್ಕುಭೇದವಡದು, ಅಂತಃಕರಣಚತುಷ್ಟಯವೆನಿಪ ಸೂಕ್ಷ್ಮಶರೀರದಲ್ಲಿ ಜೀವನು ನೆಲಸಿ, ಕರಣನಿಕರಂಗಳಿಗೆ ತಾನೇ ಕರ್ತೃವಾಗಿ ಕರಣದಲ್ಲಿ ಕೂಡಿದಕಾರಣವೇ ಬಾಲ್ಯವಾಗಿ, ಕಾರಣದಲ್ಲಿ ಕೂಡಿದಕಾರಣವೇ ವಯಸ್ಸಾಗಿ, ಈ ಎರಡರ ನಷ್ಟವೇ ವಾರ್ಧಕ್ಯವಾಗಿ, ಅಂತಪ್ಪ ವಾರ್ಧಕ್ಯದಲ್ಲಿ ಧಾತುಗುಣಂಗಳಂ ಬಿಟ್ಟು ಗುಣಧಾತುಗಳನನುಸರಿಸಿ, ಕರಣಂಗಳಂ ಬಿಟ್ಟು ಕಾರಣಂಗಳೊಳಗೆ ಕೂಡಿ, ಅಗ್ನಿಮುಖದಲ್ಲಿ ಲಯವನೈದಿ ಪೋದಲ್ಲಿ, ಮರಳಿ ಸೃಷ್ಟಿಯಪ್ಪ ಪರಿಯೆಂತೆಂದೊಡೆ: ಆ ಕಾರಣವಿಷಯಂಗಳೆಲ್ಲಾ ಜಲಮುಖದಲ್ಲಿ ದ್ರವಿಸಿ, ಆ ಗುಣಂಗಳಿರ್ಪ ಧಾತುಗಳು ಪ್ರಕಟಮಾಗಿ ತದ್ವಾಸನೆವಿಡಿದು, ಬಿಂದುಮುಖದಲ್ಲಿ ಶರೀರಿಯಾಗಿ ತೋರುತಿರ್ಪುದೇ ಸೃಷ್ಟಿಯು. ಇಂತಪ್ಪ ಸೃಷ್ಟಿ ಸಂಹಾರಂಗಳಿಗೆ ತಾನೇ ಕರ್ತೃವಾಗಿ, ವಿಷಯಂಗಳಿಂದ ಆ ಮನವನ್ನೂ, ಇಂದ್ರಿಯಂಗಳಿಂದ ತನುವನ್ನೂ ರಕ್ಷಿಸುತ್ತಾ, ಅಂತಪ್ಪ ನಾದಬಿಂದುಗಳಿಗೆ ತಾನೇ ಕಳಾಸ್ವರೂಪಮಾಗಿರ್ಪ ಜೀವನು ಅಗ್ನಿಮುಖದಲ್ಲಿ ಲಯವನ್ನೂ, ಜಲಮುಖದಲ್ಲಿ ಸೃಷ್ಟಿಯನ್ನೂ ಹೊಂದುತ್ತಿರ್ಪ ಕೋಟಲೆಯಂ ಕಳೆವುದಕ್ಕುಪಾಯಮಂ ಕಾಣದೆ, ಭವಭವಂಗಳಲ್ಲಿ ಕಳವಳಿಸಿ ಬಳಲುತ್ತಿರಲಾ ಜೀವನಿಗೆ ಪ್ರಸನ್ನವಾಗಿ, ನಾದರೂಪಮಾದ ಭಾವಲಿಂಗಮಂ ಮನದೊಳಗೆ, ಬಿಂದುರೂಪಮಾದಿಷ್ಟಲಿಂಗಮಂ ಶರೀರದೊಳಗೆ, ಗುಣಧಾತುಗಳಲ್ಲಿ ಭಾವಸೆಜ್ಜೆಗಳೊಳಿಟ್ಟು ಧರಿಸಲು, ಜೀವನು ತಾನು ಇಚ್ಛಾಶಕ್ತಿಯೊಳಗೆ ಕೂಡಿ, ಕರಣಂಗಳಲ್ಲಿಹ ಕ್ರಿಯಾಶಕ್ತಿಯನ್ನು ಇಷ್ಟಲಿಂಗಕ್ಕೆಕೊಟ್ಟು, ಕಾರಣದಲ್ಲಿರ್ಪ ಕ್ರಿಯಾಶಕ್ತಿಯನ್ನು ಭಾವಲಿಂಗದೊಳಗೆ ಬೆರಸಿ, ಆಯಾ ಶಕ್ತಿಮುಖಂಗಳಲ್ಲಿ ಆ ಲಿಂಗಂಗಳಂ ಪ್ರಸನ್ನವಂ ಮಾಡಿಕೊಳ್ಳಲು, ಇಷ್ಟಲಿಂಗಮುಖದಲ್ಲಿ ಪರಿಶುದ್ಧಮಾದ ಬಿಂದುಪ್ರಸಾದವನ್ನು ತನುಮುಖದಲ್ಲಿ ಸೇರಿಸಲು, ಧಾತುರೂಪಮಾಗಿ ಧಾತುವಿನೊಳಗಿರ್ಪ ತಮಸ್ಸನ್ನು ಕೆಡಿಸಲು, ಅಗ್ನಿಮುಖದಲ್ಲಿ ಬರ್ಪ ಲಯವಡಗಿತ್ತು. ಭಾವಲಿಂಗಮುಖದಲ್ಲಿ ಪರಿಶುದ್ಧಮಪ್ಪ ಶಬ್ದಪ್ರಸಾದವನ್ನು ಮನೋಮುಖದಲ್ಲಿ ಸೇವಿಸಲು, ಅವೇ ಗುಣಸ್ವರೂಪಮಾಗಿ, ಗುಣದೊಳಗಿರ್ಪ ತಮಸ್ಸಂ ಕೆಡಿಸಲು, ಜೀವನಂ ಪರಿವೇಷ್ಟಿಸಿರ್ಪ ಸೂಕ್ಷ್ಮಶರೀರವೇ ತೇಜೋರೂಪಮಾಯಿತ್ತು. ತದಾಧಾರಮಪ್ಪ ಸ್ಥೂಲಶರೀರವೇ ವಿಶ್ವವಾಯಿತ್ತು. ತತ್ಕಾರಣಮಪ್ಪ ಕಾರಣಶರೀರವೇ ಪ್ರಾಜ್ಞವಾಯಿತ್ತು. ಅಂತಪ್ಪ ಕಾರಣದಲ್ಲಿರ್ಪ ಭಾವಲಿಂಗವು ಶರೀರದಲ್ಲಿರ್ಪ ಇಷ್ಟಲಿಂಗವು ಎಂಬ ಸುವರ್ಣವಸ್ತುಗಳನ್ನು ಧ್ಯಾನಹಸ್ತದಲ್ಲಿ ಗ್ರಹಿಸಿ, ಹೃದಯಕುಂಡದಲ್ಲಿ ಅಷ್ಟದಳಕರ್ನಿಕೆಯೆಂಬ ಮೂಸೆಯೊಳಗಿಟ್ಟು, ಕರ್ಮಸಮಿಧೆಯಲ್ಲಿ ಜ್ಞಾನಾಗ್ನಿಯನ್ನು ಹೊತ್ತಿಸಿ, ತಾನೆಂಬ ಬೆಳುಗಾರದಿಂ ಕರಗಿಸಲು, ಎರಡೂ ಒಂದಾಗಿ, ಅಲ್ಲಿರ್ಪ ಕಳಂಕವೆಲ್ಲಾ ಜ್ಞಾನಾಗ್ನಿಮುಖದಲ್ಲಿ ಲಯವಂ ಪೊಂದಿ ಘಟ್ಟಿಗೊಂಡಲ್ಲಿ, ಆ ಬೆಳುಗಾರವದರೊಳಗೆ ಬೆರೆದು ಕಾಣಬಾರದಿರ್ಪಂತೆ, ಅಹಂಭಾವವು ಲಿಂಗದೊಳಗಡಗಿ, ಭೇದದೋರದಿರ್ಪುದೆ ಪ್ರಾಣಲಿಂಗಸ್ಥಲವು. ಇಂತಪ್ಪ ಸುಖವನ್ನು ನನಗೆ ಸಿದ್ಧಿಯಪ್ಪಂತೆಮಾಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. "