Index   ವಚನ - 30    Search  
 
ಸ್ಥೂಲಶರೀರವೇ ಬಹಿರಂಗವು, ಸೂಕ್ಷ್ಮಶರೀರವೇ ಅಂತರಂಗವು. ಜೀವನು ಉದಯದಲ್ಲಿ ಬಹಿರಂಗಕರ್ಮವ್ಯಾಪಾರದಲ್ಲಿ ಸಂಚರಿಸುತ್ತಿರ್ಪನು. ಅಸ್ತಮಾನದಲ್ಲಿ ಅಂತರಂಗದ ಅರಮನೆಯಂ ಸೇರಿ ಅಂತಃಕರ್ಮ ವ್ಯಾಪಾರದಲ್ಲಿದ್ದು ಬಹಿಃಕರ್ಮವ್ಯಾಪಾರ ಸಮಾಪ್ತಿಗಾಗಿ ಅಂತರಂಗಮಂ ಬಿಟ್ಟು, ಬಹಿರಂಗಮಪ್ಪ ಸ್ಥೂಲಶರೀರದಲ್ಲಿ ಪ್ರವೇಶಿಸುತ್ತಿರಲು, ಅಗತ ನಿರ್ಗತಂಗಳೇ ಭವವೆನಿಸುತ್ತಿರ್ಪುದು. ತದ್ವ್ಯಾಪಾರಕೋಟಲೆಗಳೆ ಸುಖದುಃಖಗಳೆನಿಸುತ್ತಿರ್ಪವು. ಇದಕ್ಕೆ ಇಚ್ಛೆಯೇ ಕಾರಣಮಾಗಿಹುದು. ಅಂತಪ್ಪ ಇಚ್ಛೆಯೇ ಜ್ಞಾನಸ್ವರೂಪಮಾಗಿ, ಜೀವನು ನೇತ್ರಸ್ವರೂಪಮಾದಲ್ಲಿ ಅಂತರಂಗದ ಮನೆಯಲ್ಲಿ ಭಾವಪರ್ಯಂಕದಲ್ಲಿ ಸುಮನಶ್ಚಯಾಮೋದಭರಶುಚಿವಿರಚಿತಶಯನದಲ್ಲಿ ತಜ್ಞಾನಶಕ್ತಿಯೊಳಗೆ ನಿರ್ವಾಣರತಿಸುಖಾನಂದದೊಳಗೆ ಕ್ರೀಡಿಸುತ್ತಿರ್ಪುದೇ ಲಿಂಗೈಕ್ಯಾಶ್ರಯಪದವೆನಿಸಿರ್ಪುದು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.