Index   ವಚನ - 46    Search  
 
ಸತ್ವಸ್ವರೂಪನಾದ ಶಿವನೇ ವಿಷ್ಣುಗುಣವು. ಅಂತಪ್ಪ ಸತ್ವಸ್ವರೂಪನಾದ ಶಿವನಂ ಹೃದಯದಲ್ಲಿ ಧರಿಸಿರ್ಪುದರಿಂದ ವಿಷ್ಣುವು ಸಂರಕ್ಷಣಕರ್ತೃವಾದನು. ತಮಸ್ವರೂಪನಾದ ವಿಷ್ಣುವನ್ನು ಹೃದಯದಲ್ಲಿ ಧರಿಸಿರ್ಪುದರಿಂದ ಶಿವನೇ ಸಂಹಾರಕರ್ತೃವಾದನು. ಅದೆಂತೆಂದೊಡೆ: ಪುರುಷಧ್ಯಾನದಲ್ಲಿರ್ಪ ಪತಿವ್ರತಾಸ್ತ್ರೀಗೆ ಅದೇ ಸ್ವಧರ್ಮವಾಗಿ ಮೋಕ್ಷ ಕಾರಣಮಾಯಿತ್ತು. ಅಂತಪ್ಪ ಸ್ತ್ರೀಯಳ ಧ್ಯಾನದಲ್ಲಿರ್ಪ ಪುರುಷನಿಗೆ ಅದೇ ಸ್ವಧರ್ಮವಾಗಿ ಪ್ರಪಂಚಕಾರಣಮಾಯಿತ್ತು. ಇಂತಪ್ಪ ಸತ್ವವೇ ಅಮೃತವು, ತಮಸ್ಸೇ ವಿಷವು. ಅಮೃತವೇ ಸಕಲರಿಗೂ ಸೇವನಾಯೋಗ್ಯಮಾಗಿ ರಕ್ಷಿಸುತ್ತಿರ್ಪುದು, ವಿಷವೇ ಸಂಹಾರಕಾರಣಮಾಗಿರ್ಪುದು. ಅಮೃತವೇ ಎಲ್ಲರಿಗೂ ಅಕ್ಕುದಲ್ಲದೆ, ವಿಷವಹ್ನಿಯೊಬ್ಬನಿಗಲ್ಲದೆ ಎಲ್ಲರಿಗೂ ಅಕ್ಕುದೇನಯ್ಯಾ? ವಿಷಾಹಾರಿಯು ನೀನು, ಅಮೃತಾಹಾರಿಯು ನಾನು ಆದುದರಿಂದ ನನ್ನಲ್ಲಿರ್ಪ ತಮಸ್ಸೆಂಬ ವಿಷವನ್ನು ನೀಂ ಕೊಂಡು, ನೀನೆಂಬ ಪರಮಾಮೃತವನೆನಗೆ ದಯಪಾಲಿಸಿದರೆ, ನಾನು ನಿನ್ನ ದಯೆಯಿಂ ನಿತ್ಯನಾಗಿರ್ಪೆನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.