ರಜೋಗುಣದಿಂದ ಶಕ್ತಿಲಯವು,
ತಮೋಗುಣದಿಂದ ಯುಕ್ತಿಲಯವು,
ಸತ್ವಗುಣದಿಂದ ರಕ್ತಿಲಯವು.
ಅಂತಪ್ಪ ರಜೋಗುಣವೇ ಪೃಥ್ವಿಯು,
ತಮೋಗುಣವೇ ವಾಯುವು,
ಪೃಥ್ವಿಯಲ್ಲಿ ಅಗ್ನಿಯು ಹುಟ್ಟಿ,
ತಮೋರೂಪಮಾದ ವಾಯುಜಲಗಳು
ಪೃಥ್ವಿಯಗ್ನಿಗಳಲ್ಲಿ ಕೂಡಲು
ರಜೋಗುಣವು ಹೆಚ್ಚುತ್ತಿಹುದು.
ಅಂತಪ್ಪ ಅಗ್ನಿ ವಾಯುಗಳೇಕಮಾಗಿ,
ಪೃಥ್ವೀಜಲಗಳೇಕಮಾದಲ್ಲಿ,
ಈ ಪೃಥ್ವಿಯೇ ಮನುಷ್ಯರಿಗೆ ಆಧಾರಮಾಯಿತ್ತು,
ವಾಯುವೇ ದೇವತೆಗಳಿಗೆ ಆಧಾರಮಾಯಿತ್ತು,
ಇವೆಲ್ಲಕ್ಕೂ ಸತ್ವಸ್ವರೂಪಮಾದ ಆಕಾಶವೇ ಕಾರಣಮಾಯಿತ್ತು.
ಮನುಷ್ಯರು ರಜೋರೂಪಮಾದ
ಪೃಥ್ವಿಯನಾಶ್ರಯಿಸಿದರಾದಕಾರಣ
ಸ್ವಲ್ಪಕಾಲ ಬಾಳುತ್ತಿರ್ಪರು.
ದೇವತೆಗಳು ತಮೋರೂಪಮಾದ
ವಾಯುವನಾಶ್ರಯಿಸಿದ ಕಾರಣ
ದೀರ್ಘಕಾಲ ಬಾಳುತ್ತಿರ್ಪರು.
ಸುಷುಪ್ತಿಯು ಸ್ವಪ್ನದೋಪಾದಿಯಲ್ಲಿ ತೋರುತ್ತಿರ್ಪುದರಿಂದ
ಈ ರಜಸ್ಸಿನಲ್ಲಿ ಕಾಮನೂ ತಮಸ್ಸಿನಲ್ಲಿ ಕಾಲನೂ
ತತ್ತದ್ಗುಣಾಧಿದೇವತೆಗಳಾಗಿ,
ಕಾಮನು ಸೃಷ್ಟಿಸಿದ್ದನ್ನು ಕಾಲನು ಸಂಹರಿಸುತ್ತಾ,
ಕಾಲನು ಸಂಹರಿಸಿದ್ದನ್ನು ಕಾಮನು ಸೃಷ್ಟಿಸುತ್ತಾ,
ಜೀವನನ್ನು ಭವಕ್ಕೆ ತಂದು ಕೋಟಲೆಗೊಳಿಸುತ್ತಿರ್ಪರು.
ಇಂತಪ್ಪ ರಜೋರೂಪಮಾದ ಪೃಥ್ವಿಯಲ್ಲಿ
ತಮೋರೂಪಮಾದ ಜಲವು ಬೆರೆಯಲು,
ಈ ಎರಡೂ ತಮೋರೂಪಮಾದ ಸ್ಥೂಲಶರೀರಮಾಯಿತ್ತು.
ತಮೋರೂಪಮಾದ ವಾಯುವಿನಲ್ಲಿ
ರಜೋರೂಪವಾದ ಅಗ್ನಿಯು ಬೆರೆಯಲು,
ಇವೆರಡೂ ಸೂಕ್ಷ್ಮಶರೀರಮಾಯಿತ್ತು.
ಸತ್ವಸ್ವರೂಪಮಾದ ಆಕಾಶವೇ ಕಾರಣಶರೀರವು.
ಇಂತಪ್ಪ ಪಂಚಭೌತಿಕಮಾದ ತನುತ್ರಯಂಗಳಲ್ಲಿ
ಆತ್ಮನು ಆಯಾ ಗುಣಂಗಳಲ್ಲಿ ಬದ್ಧನಾಗಿ,
ಸುಖದುಃಖಾನುಭವಕ್ಕೆ ಕಾರಣಮಾಗಿರ್ಪನು.
ಅದೆಂತೆಂದೊಡೆ:
ತಮೋರೂಪಮಾದ ಸೂಕ್ಷ್ಮಶರೀರದಲ್ಲಿ ಅಂತರಾತ್ಮನಾಗಿ,
ರಜೋರೂಪಮಾದ ಸ್ಥೂಲಶರೀರದಲ್ಲಿ ಜೀವಾತ್ಮನಾಗಿ,
ಸತ್ವಸ್ವರೂಪಮಾದ ಕಾರಣಶರೀರದಲ್ಲಿ
ಪರಮಾತ್ಮನಾಗಿ ಪ್ರಕಾಶಿಸುತ್ತಿರ್ಪನು.
ಇಂತಪ್ಪ ರಜೋಲಹರಿಯ ಸುರತಾನಂದ,
ತಮೋಲಹರಿಯ ನಿದ್ರಾನಂದ, ಸತ್ವಲಹರಿಯ ಜ್ಞಾನಾನಂದ.
ಅಂತಪ್ಪ ಜ್ಞಾನಾನಂದಲಹರಿಯಲ್ಲಿ ಪರಿಣಾಮಿಸಿ
ಪರವಶನಾಗಿರ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Rajōguṇadinda śaktilayavu,
tamōguṇadinda yuktilayavu,
satvaguṇadinda raktilayavu.
Antappa rajōguṇavē pr̥thviyu,
tamōguṇavē vāyuvu,
pr̥thviyalli agniyu huṭṭi,
tamōrūpamāda vāyujalagaḷu
pr̥thviyagnigaḷalli kūḍalu
rajōguṇavu heccuttihudu.
Antappa agni vāyugaḷēkamāgi,
pr̥thvījalagaḷēkamādalli,
ī pr̥thviyē manuṣyarige ādhāramāyittu,
Vāyuvē dēvategaḷige ādhāramāyittu,
ivellakkū satvasvarūpamāda ākāśavē kāraṇamāyittu.
Manuṣyaru rajōrūpamāda
pr̥thviyanāśrayisidarādakāraṇa
svalpakāla bāḷuttirparu.
Dēvategaḷu tamōrūpamāda
vāyuvanāśrayisida kāraṇa
dīrghakāla bāḷuttirparu.
Suṣuptiyu svapnadōpādiyalli tōruttirpudarinda
ī rajas'sinalli kāmanū tamas'sinalli kālanū
tattadguṇādhidēvategaḷāgi,Kāmanu sr̥ṣṭisiddannu kālanu sanharisuttā,
kālanu sanharisiddannu kāmanu sr̥ṣṭisuttā,
jīvanannu bhavakke tandu kōṭalegoḷisuttirparu.
Intappa rajōrūpamāda pr̥thviyalli
tamōrūpamāda jalavu bereyalu,
ī eraḍū tamōrūpamāda sthūlaśarīramāyittu.
Tamōrūpamāda vāyuvinalli
rajōrūpavāda agniyu bereyalu,
iveraḍū sūkṣmaśarīramāyittu.
Satvasvarūpamāda ākāśavē kāraṇaśarīravu.
Intappa pan̄cabhautikamāda tanutrayaṅgaḷalli
ātmanu āyā guṇaṅgaḷalli bad'dhanāgi,
Sukhaduḥkhānubhavakke kāraṇamāgirpanu.
Adentendoḍe:
Tamōrūpamāda sūkṣmaśarīradalli antarātmanāgi,
rajōrūpamāda sthūlaśarīradalli jīvātmanāgi,
satvasvarūpamāda kāraṇaśarīradalli
paramātmanāgi prakāśisuttirpanu.
Intappa rajōlahariya suratānanda,
tamōlahariya nidrānanda, satvalahariya jñānānanda.
Antappa jñānānandalahariyalli pariṇāmisi
paravaśanāgirpante māḍā
mahāghana doḍḍadēśikāryaguruprabhuve.