Index   ವಚನ - 61    Search  
 
ನಿಜಮಹಾತ್ಮ್ಯಪ್ರಕಟನ ಪ್ರಪಂಚ ಕ್ರೀಡಾಕಾರಣಮಾದ ನಾನೆಂಬುಪಾಧಿಯಂ ಪ್ರಪಂಚಮುಖದಲ್ಲೇ ಕಲ್ಪಿಸಿ, ನನ್ನಲ್ಲಿ ತೋರುತ್ತಿರ್ಪ ಪ್ರಪಂಚದಿಂ ನಿಜಾಲಂಕಾರಶೋಭಿಯಾಗಿ ನನ್ನಲ್ಲುದಿಸಿದ ಪಾಪಮಲಿನಮಂ ಕಾಲರೂಪಮಾಗಿ ಸಂಹರಿಸಿ, ಪ್ರಪಂಚಪ್ರಕಟನಮಂ ಮಾಡುತಿರ್ಪೆಯಾಗಿ, ನಿನ್ನ ಮಹಿಮೆಯಂ ಜಡರೂಪಮಾಗಿರ್ಪ ನಾನೆಂತು ಬಲ್ಲೆನಯ್ಯಾ? ನೀನೇ ಸಂಹಾರಕರ್ತೃವಾಗಿ, ಶಕ್ತಿಯೇ ರಕ್ಷಣಕರ್ತೃವಾಗಿ, ನಾನೇ ಸೃಷ್ಟಿಕರ್ತೃವಾಗಿರ್ಪೆನಯ್ಯಾ. ನನ್ನಲ್ಲಿ ಬಾಹ್ಯನೈರ್ಮಲ್ಯವಂ ಅಂತರಂಗದಲ್ಲಿ ಪ್ರಕಾಶವಂ ಮಾಡಿ, ತೋರಿದಲ್ಲಿ, ನನ್ನಲ್ಲಿರ್ಪ ಮಾಯೆ ನನ್ನಲ್ಲಿಯೇ ಅಡಗಿ, ನಾನು ನಿರ್ಮಲಸ್ವರೂಪನಾಗಿ, ನನ್ನಲ್ಲಿ ನಾನೇ ಪ್ರಕಾಶಿಸುತ್ತಿರ್ಪೆನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.