Index   ವಚನ - 73    Search  
 
ಶರೀರವೇ ಹೇಯದಮೊಟ್ಟೆ ದುರ್ಗಂಧವೇ ನೈಜ, ಸುಗಂಧವೆಲ್ಲಾ ಆರೋಪಿತವಲ್ಲದೆ ನಿಜವಲ್ಲವಾಗಿ ಹೇಯವೇ ನೈಜ. ಮನಸ್ಸೇ ದುಃಖದಮೊಟ್ಟೆ, ಆ ದುಃಖವೇ ನೈಜ, ಸುಖವೇ ಆರೋಪಿತ, ಶರೀರದಲ್ಲಿರ್ಪ ಹೇಯವು ಪ್ರಬಲಗಳಾದ ವ್ಯಾಧಿಪೀಡೆಗಳನನುಭವಿಸುತ್ತಿರಲು, ಅದೇ ಜೀವನಿಗಿಹಲೋಕದಯಾತನೆಯಾಯಿತ್ತು. ದುಃಖದಮೊಟ್ಟೆಯಾಗಿರ್ಪ ಮನಸ್ಸನ್ನು ದುರ್ಗುಣಂಗಳು ಬಂದು ಅನುಭವಿಸುತ್ತಿರಲದೇ ಜೀವನಿಗೆ ಪರಲೋಕಮಾಯಿತ್ತು. ಇಂತಪ್ಪ ಶರೀರದಲ್ಲಿ ಬಿಂದುವನ್ನೂ ಮನದಲ್ಲಿ ನಾದವನ್ನೂ ಇಹಪರಕೃತ್ಯಂಗಳಿಗೆ ಸಾಧಕಭೂತಮಾಗಿ ಪರಮಾತ್ಮನಿಟ್ಟಿರ್ಪನು. ಅಂತಪ್ಪ ಬಿಂದುವೇ ಆನಂದಸ್ವರೂಪು, ನಾದವೇ ಜ್ಞಾನಸ್ವರೂಪು, ಆ ಆನಂದಬಿಂದುವು ಶರೀರಕ್ಕೆ ಕಾರಣಮಾಗಿಹುದು, ಈ ನಾದಬಿಂದುಗಳ ಉತ್ತರಮಾರ್ಗವೇ ಮನಶ್ಶರೀರಗಳಿಗೆ ಸುಖ, ನಿಜಪ್ರಕಟವಂ ಮಾಡುತ್ತಿರ್ಪುದು. ದಕ್ಷಿಣಮಾರ್ಗವೇ ದುಃಖ, ಮಿಥ್ಯಾಪ್ರಕಟವಂ ಮಾಡುತ್ತಿಹುದು. ಇವೆರಡರ ಸಂಬಂಧವಿಲ್ಲದ ವಸ್ತುವಿಗೆ ಕೋಟಲೆಗೊಂಡು ಕುದಿವುತ್ತಿರ್ಪ ಜೀವನ ಪರಿಯ ನೋಡಾ! ಜೀವನಿಗೆ ನಿಜವೇ ಭಾವ. ಆ ಭಾವದಲ್ಲಿರ್ಪುದು ಕಳಾಪದಾರ್ಥವು, ಆ ಕಳಾಮಯವಾಗಿರ್ಪುದು ಸತ್ಯವು. ಅಂತಪ್ಪ ಸತ್ಯವಂ ಹಿಡಿದು ಈ ಮಿಥ್ಯಾರೂಪಮಾದ ಸ್ಥೂಲ ಸೂಕ್ಷ್ಮಂಗಳಂ ಬಿಟ್ಟಲ್ಲಿ, ಜೀವನೇ ಪರಮನಪ್ಪನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.