Index   ವಚನ - 74    Search  
 
ದಕ್ಷಿಣದಲ್ಲಿರ್ಪ ಯಮನೇ ವಿಷ್ಣುವು; ಉತ್ತರದಲ್ಲಿರ್ಪ ಕುಬೇರನೇ ಲಕ್ಷ್ಮಿಯು. ಪಶ್ಚಿಮದಲ್ಲಿರ್ಪ ವರುಣನೇ ವಿಷ್ಣುವು; ಪೂರ್ವದಲ್ಲಿರ್ಪ ಇಂದ್ರನೇ ಲಕ್ಷ್ಮಿಯು. ಈಶಾನ್ಯದಲ್ಲಿರ್ಪ ಈಶಾನನೇ ಶಿವನು; ನೈರುತ್ಯದಲ್ಲಿರ್ಪ ನೈರುತಿಯೇ ಶಕ್ತಿಯು. ಅಗ್ನೇಯದಲ್ಲಿರ್ಪ ಅಗ್ನಿಯೇ ಶಿವನು; ವಾಯುವ್ಯದಲ್ಲಿರ್ಪ ವಾಯುವೇ ಶಕ್ತಿಯು. ಇವು ನಿಜನಾಮಸಂಬಂಧಗಳಾಗಿಹವು. ಅವು ಭಿನ್ನನಾಮಸಂಬಂಧಗಳಾಗಿ ಸಾಕಾರ ನಿರಾಕಾರಮೂರ್ತಿಗಳಾಗಿಹವು. ಶಿವನು ಸಾಕಾರದಲ್ಲಿ ಸಂಹರಿಸಿ, ನಿರಾಕಾರದಲ್ಲಿ ರಕ್ಷಿಸುತ್ತಿಹನು. ವಿಷ್ಣುವು ಸಾಕಾರದಲ್ಲಿ ರಕ್ಷಿಸಿ, ನಿರಾಕಾರದಲ್ಲಿ ಸಂಹರಿಸುತ್ತಿಹನು. ಕೆಳಗೆ, ಬಿಂದುಮುಖದಲ್ಲಿ ಸೃಷ್ಟಿಸುವನೇ ಬ್ರಹ್ಮನು, ಮೇಲೆ, ನಾದ ಮುಖದಲ್ಲಿ ಸೃಷ್ಟಿಸುತ್ತಿರ್ಪಳೇ ಸರಸ್ವತಿಯು. ಅಷ್ಟದಳಕಮಲದ ಮೂಲವೇ ಬ್ರಹ್ಮನು, ಅದರಗ್ರದಲ್ಲಿ ತೋರುವ ವಾಸನೆಯು ಸರಸ್ವತಿಯು. ಆ ಕಮಲದ ಹೃದಯವೇ ಮೇರುವು, ಆ ಮೇರುಮಧ್ಯದಲ್ಲಿರ್ಪುದೇ ಮಹಾಲಿಂಗವು. ಅಲ್ಲಿರ್ಪ ಮಹಾಲಿಂಗವಂ ಗುರುವು ಬಾಹ್ಯಕ್ಕೆ ತಂದಿದಿರಿಟ್ಟಲ್ಲಿ, ಸ್ಫಟಿಕಭಾಂಡದಲ್ಲೊಳಗಿರ್ಪ ವಸ್ತುವೇ ಹೊರಗೆ, ಹೊರಗಿರ್ಪ ವಸ್ತುವೇ ಒಳಗೆ ತೋರಿ, ಆ ಭಾಂಡವು ತನ್ನ ನಿಜಗುಣವನಳಿದು ವಸ್ತುವು ಗುಣರೂಪಮಾಗಿ ತೋರ್ಪಂದದಿ, ಇಷ್ಟ ಪ್ರಾಣಗಳೇಕಮಾದಲ್ಲಿ, ಶರೀರವು ತನ್ನ ಮುನ್ನಿನ ಗುಣವನಳಿದು, ಅಗ್ನಿಸ್ವರೂಪಮಾದಿಷ್ಟಲಿಂಗದಲ್ಲಿ ಐಕ್ಯವಾದುದರಿಂ ದಹನಕ್ಕಯೋಗ್ಯಮಾಯಿತ್ತು. ನಿರಾಕಾರವಾದ ಪ್ರಾಣವು ಈಶಾನ್ಯಸ್ವರೂಪಮಾದ ಪ್ರಾಣಲಿಂಗದಲ್ಲಿ ಲೀನಮಾದುದರಿಂ ಕರ್ಮಸಂಸ್ಕಾರಯೋಗ್ಯಮಲ್ಲಮಾಯಿತ್ತು. ಆದುದರಿಂದಾ ಶಿವಭಕ್ತನಿಗೆ ದಹನಸಂಸ್ಕಾರಮಿಲ್ಲಮಾಯಿತ್ತು. ಇಂತಪ್ಪ ಸಾಕಾರ ನಿರಾಕಾರ ಶಿವಶಕ್ತಿಸ್ವರೂಪಗಳೆಲ್ಲವೂ ಭಾವದಲ್ಲೊಂದೇ ಆಗಿ ಪರಿಪೂರ್ಣತೃಪ್ತಿಯಲ್ಲಿ ನಿಜಸ್ವಭಾವಮಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.