Index   ವಚನ - 81    Search  
 
ಪಶುಗಳು ಆಹಾರ ಮೈಥುನ ನಿದ್ರೆಗಳನ್ನು ಕಂಡಲ್ಲಿ, ಬಂದಲ್ಲಿ, ಅನುಭವಿಸುತ್ತಿರ್ಪುದರಿಂ ಪರಲೋಕದಲ್ಲಿ ಸುಖದುಃಖಾನುಭಗಳಿಲ್ಲದೆ, ಕಾಮಲೇಪವಿಲ್ಲದೆ, ಮನುಷ್ಯಜನ್ಮದಲ್ಲಿ ಮಾಡಿದ ಕರ್ಮಾನುಭವನಿಮಿತ್ತಮಾಗಿ, ಮರಳಿ ಮರಳಿ ತಿರ್ಯಗ್ರೂಪಮಾಗಿ ಜನಿಸಿ, ಆ ಕರ್ಮಾನುಭವವು ತೀರಲು, ಮನುಷ್ಯಜನ್ಮವನೆತ್ತಿ. ಆಹಾರಾದಿ ಸಕಲಪದಾರ್ಥಂಗಳಂ ದೊರಕಿದಲ್ಲನುಭವಿಸದೆ, ರಾಗ ಲೋಭಯುಕ್ತಗಳಾಗಿ, ತಮ್ಮ ಮಂದಿರಕ್ಕೆ ತಂದು, ಪುತ್ರ ಮಿತ್ರ ಕಳತ್ರಯುಕ್ತವಾಗನುಭವಿಸಿ, ಮಿಕ್ಕುದಂ ಕೂಡಲಿಕ್ಕುದರಿಂ ಇಹದಲ್ಲಿ ಮಾಡಿದ ಕರ್ಮವಂ ಪರದಲ್ಲನುಭವಿಸಬೇಕಾಯಿತ್ತು. ಆದುದರಿಂದಂದಿಗೆ ದೊರೆತ ಪದಾರ್ಥವನಂದೇ ಅನುಭವಿಸಿ, ಲೋಭರಾಗಾಭಿಮಾನವಿಲ್ಲದಾತಂಗೆ ಕರ್ಮಲೇಪವಿಲ್ಲ. ಮನುಷ್ಯರಲ್ಲಿ ಕರ್ಮಲೇಪವಿಲ್ಲದಾತನೇ ವಿರಕ್ತನು, ಆತನೇ ಜೀವನ್ಮುಕ್ತನು. ಅಂತಪ್ಪ ನಿರ್ಲೇಪಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.