Index   ವಚನ - 93    Search  
 
ಗುರುವೇ ಪರಬ್ರಹ್ಮವು. ಅದೆಂತೆಂದೊಡೆ: ಲಲಾಟದಲ್ಲಿರ್ಪ ಆತ್ಮನಂ ಭಸ್ಮತೇಜೋಮುಖದಿಂ ಕರಗ್ರಸ್ತವಂ ಮಾಡಿ, ಹಸ್ತಮಸ್ತಕಸಂಗದಿಂ ಬ್ರಹ್ಮಸ್ಥಾನದಲ್ಲಿ ಭಾವಮಧ್ಯದಲ್ಲಿಂಬಿಟ್ಟು ಆ ವಸ್ತುವೇ ಶಿವನೆಂದು ಕರ್ಣೋಪದೇಶಮಂ ಮಾಡಿ, ಆ ವಸ್ತು ಹ್ಯಾಂಗಿರ್ಪುದೆಂದರೆ ಹೀಂಗಿರ್ಪುದೆಂದು ಸಾಕಾರಮೂರ್ತಿಯಾದ ಲಿಂಗಮಂ ಕರದಲ್ಲಿ ಕೊಟ್ಟು, ಒಳಗಿರ್ಪ ಮಂತ್ರವೂ ಹೊರಗಿರ್ಪ ಲಿಂಗವೂ ಭಾವದಲ್ಲೊಂದೆಯಾಗಿ ಪ್ರಕಾಶಿಸುವಂತೆ ಮಾಡಿ, ಅಂತಃಕರ್ಮವು ಮಂತ್ರದಿಂ, ಬಾಹ್ಯಕರ್ಮವು ಲಿಂಗದಿಂ ಪೂತಮಾಗಿರ್ಪ ವಾಸನೆಯಳಿದು, ಲಿಂಗಪ್ರಸಾದೋಪಭೋಗದಿಂ ಕರಣಂಗಳೆಲ್ಲಾ ಲಿಂಗದಕಿರಣಂಗಳಾಗಿ ಲಿಂಗಾನುಭವಸುಖದಿಂ ತನ್ನಂ ಮರೆತು ಲಿಂಗವೇ ತಾನಾಗಿರ್ಪವನೇ ಜಂಗಮವು. ಲಿಂಗಯಂತ್ರದಲ್ಲಿ ಮಂತ್ರ ಬೀಜಾಕ್ಷರವನಿಂಬಿಟ್ಟು, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಿಂ ಪೂಜಿಸುತ್ತಿರ್ಪಾತನೇ ಭಕ್ತನು. ಗುರುವೆಂಬ ಪರಬ್ರಹ್ಮದಲ್ಲಿ ಜಂಗಮ ಲಿಂಗ ಭಕ್ತರೆಂಬ ಮೂರು ಮೂರ್ತಿಗಳುತ್ಪನ್ನರಾಗಿ, ಭಕ್ತನು ಕರ್ಮವಂ ಸೃಷ್ಟಿಸುತ್ತಿರ್ಪನು, ಲಿಂಗವು ತತ್ಕರ್ಮವಂ ರಕ್ಷಿಸುತ್ತಿರ್ಪುದು, ಜಂಗಮವು ಆ ಸತ್ಕರ್ಮಮುಖದಿಂ ಬಂದ ಪದಾರ್ಥಗಳನ್ನು ಉಪಭೋಗವ್ಯಾಜದಿಂ ಸಂಹರಿಸುತ್ತಿರ್ಪನು. ಸೃಷ್ಟಿಕರ್ತೃವೇ ಸ್ಥೂಲವೂ ಸ್ಥಿತಿಕರ್ತೃವೇ ಸೂಕ್ಷ್ಮವೂ ಸಂಹಾರಕರ್ತೃವೇ ಕಾರಣವೂ ಆದುದರಿಂದ, ಸ್ಥೂಲಕ್ಕೆ ಸೂಕ್ಷ್ಮವೇ ಚೈತನ್ಯವು, ಸೂಕ್ಷ್ಮಕ್ಕೆ ಕಾರಣವೇ ಚೈತನ್ಯವು, ಆ ಕಾರಣವಿದ್ದಂತಿರ್ಪುದು. ಸಕಲಶರೀರಕ್ಕೂ ಶಿರಸ್ಸೇ ಕಾರಣಮಾಗಿರ್ಪಂತೆ, ಲಿಂಗಭಕ್ತರಿಗೆ ಜಂಗಮವೇ ಕಾರಣಮಾಗಿ, ಜಂಗಮೋಪಭೋಗದಿಂ ಲಿಂಗವು ತೃಪ್ತಿಗೊಳ್ಳುತ್ತಿರ್ಪುದಾದುದರಿಂದ ಜಂಗಮಪೂಜೆಯೇ ಸಕಲಕ್ಕೂ ಕಾರಣಮಾಯಿತ್ತು. ಕಾರಣಶರೀರವಂ ಹೊಂದುವದೇ ಸೂಕ್ಷ್ಮವು, ಅದೇ ಸ್ವರೂಪಜ್ಞಾನವು, ಅದೇ ಅಭೇದವು, ಅಂತಪ್ಪ ಜಂಗಮನ ಸೇವೆ ಎನಗೆ ಸಸಾಧ್ಯಮಪ್ಪಂತೆ ಮಾಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.