Index   ವಚನ - 95    Search  
 
ಪೂರ್ವಾದಿಯಾಗಿ ವಾಯವ್ಯಪರ್ಯಂತವೂ ಸ್ವರ್ಗವು, ಆಗ್ನ್ಯಾದಿಯಾಗಿ ವರುಣದಿಕ್ಪರ್ಯಂತವೂ ಪಾತಾಳವು, ಅದೇ ಉತ್ತರ, ಇದೇ ದಕ್ಷಿಣವೆನಿಸಿರ್ಪುದು. ಮಧ್ಯದೊಳಿರ್ಪ ಮೇರುವಂ ಪರಿವೇಷ್ಟಿಸಿರ್ಪ ಭೂಮಿಯೇ ಮರ್ತ್ಯಲೋಕವು. ಇಂತಪ್ಪ ಸ್ವರ್ಗಪಾತಾಳಂಗಳಲ್ಲಿಂದ್ರ ಯಮರು ಕರ್ತೃಗಳಾಗಿ ಸುಖದುಃಖಂಗಳಿಗೆ ಕಾರಣಮಾಗಿಹರು. ಮರ್ತ್ಯದಲ್ಲಿ ಜೀವರೇ ಕರ್ತೃಗಳಾಗಿ ಸ್ವತಂತ್ರರಾಗಿ ಕರ್ಮಗಳಂ ಮಾಡಿ ಪುಣ್ಯಪಾಪಂಗಳಂ ಸಂಪಾದಿಸಿ, ಉತ್ತರದಕ್ಷಿಣಗಳಲ್ಲಿ ಸುಖದುಃಖಗಳನನುಭವಿಸುತ್ತಿರ್ಪರು ಅದೆಂತೆಂದೊಡೆ: ಈ ಮರ್ತ್ಯದಲ್ಲಿರ್ಪ ಅನೇಕ ಲಕ್ಷ ಭೇದವಡೆದ ಜೀವಜಾಲಂಗಳೊಳಗೆ ಮನುಷ್ಯಜನ್ಮವು ಸಂಪಾದ್ಯಕರ್ಮಕಾರಣಮಾಗಿರ್ಪುದು. ಸತ್ಕರ್ಮಸವೆದ ಹೀನವೂ ದುಷ್ಕರ್ಮಸವೆದ ಶ್ರೇಷ್ಠವೂ ಮನುಷ್ಯಶರೀರಮಪ್ಪುದು. ಇಂತಪ್ಪ ಸಂಧಿಕಾಲದಲ್ಲತಿಸೂಕ್ಷ್ಮವಾಗಿರ್ಪ ಮನುಷ್ಯಜನ್ಮದಲ್ಲಿ ಜೀವನು ಸ್ವತಂತ್ರನಾಗಿರುತ್ತಿರಲು, ಶತ್ರುರೂಪರಾದ ಯಮದೂತರೂ ಮಿತ್ರರೂಪರಾದ ದೇವದೂತರೂ ದಕ್ಷಿಣೋತ್ತರಪಾರ್ಶ್ವಂಗಳಲ್ಲಿ ಒಬ್ಬೊಬ್ಬರಿಗಿಬ್ಬಿಬ್ಬರಾಗಿದ್ದುಕೊಂಡು, ಜೀವರು ಮಾಡಿದ ಸತ್ಕರ್ಮ ದುಷ್ಕರ್ಮಗಳಿಗನುಭವನೀಯ ಕಾರಣರಾಗಿರಲೀ ಸ್ವತಂತ್ರರೂಪಮಾದ ಮನುಷ್ಯಶರೀರವು ಪೂರ್ವಕರ್ಮದ ಕೂಡ ಲಯಮಾದಲ್ಲಿ, ಈ ಮನುಷ್ಯಜನ್ಮದಲ್ಲಿ ಮಾಡಿದ ಸತ್ಕರ್ಮ ದುಷ್ಕರ್ಮಂಗಳು ಅನುಭವಕಾರಣವಾದುದರಿಂ ಆ ಸತ್ಕರ್ಮಂಗಳಿಂ ಕೂಡಿ ಶರೀರವಂ ಬಿಟ್ಟಲ್ಲಿ, ಯಾವ ಕರ್ಮವು ಸ್ವಲ್ಪವೋ ಆ ಕರ್ಮವೇ ಜೀವನಿಗೆ ಮುಂದಾಗಿ, ಅನುಭವಶರೀರವಾಗಿ, ಜೀವನು ಆ ಶರೀರವಂ ಪ್ರವೇಶಿಸಿದಲ್ಲಿ ಅದು ದೇವಶರೀರಮಾದರೆ, ಅದನ್ನು ದೇವದೂತರು ಅಪ್ರದಕ್ಷಿಣಮಾಗಿ ದೇವಲೋಕಕ್ಕೆ ಕೊಂಡುಹೋಗಲು, ಆ ಸುಖಾನುಭವದಿಂದ ಆ ಶರೀರವು ಸಮೆದು, ದುಷ್ಕರ್ಮಮಯವಾದ ಪ್ರೇತಶರೀರವನಾಂತಲ್ಲಿ ವಾಯವ್ಯಕ್ಕೆ ಕೊಂಡುಹೋಗಿ ವರುಣದಿಕ್ಕಿನಲ್ಲಿ ಮುಂದಾಗಿಬಂದು ಕಾದಿರ್ಪ ಯಮದೂತರ ವಶಕ್ಕೆ ಕೊಟ್ಟಲ್ಲಿ ಆ ದುಷ್ಕರ್ಮವು ತೀರುವವರೆಗೂ ಯಮಯಾತನೆಗಳನನುಭವಿಸಿ, ಆ ದುಷ್ಕರ್ಮಶೇಷದಿಂದ ಮರ್ತ್ಯಲೋಕದಲ್ಲಿ ಹೀನಜನ್ಮಗಳನೆತ್ತುತ್ತಾ ಇಹನು. ಪ್ರೇತಶರೀರವಂ ಮುಂದಾಗಿ ಪ್ರವೇಶಿಸಿದಲ್ಲಿ ಯಮದೂತರು ಪ್ರದಕ್ಷಿಣಮಾರ್ಗದಲ್ಲಿ ಯಮಲೋಕಕ್ಕೆ ಕೊಂಡುಹೋಗಲು, ಯಾತನೆಗಳಿಂದಾಶರೀರವು ಸವೆದು, ಸತ್ಕರ್ಮಮಯಮಾದ ದೇವಶರೀರವನಾಂತಲ್ಲಿ ವರುಣದಿಕ್ಕಿಗೆ ಕೊಂಡುಹೋಗಿ, ಮುಂದಾಗಿ ಬಂದು ಕಾದಿರ್ಪ ದೇವದೂತನ ವಶಕ್ಕೆ ಕೊಟ್ಟಲ್ಲಿ ಆ ಶರೀರವು ದೇವಲೋಕವಂ ಸೇರಿ ಸಕಲ ಸುಖಂಗಳನನುಭವಿಸಿ, ಮರ್ತ್ಯಲೋಕದೊಳಗೆ ದಿವ್ಯಶರೀರಂಗಳನೆತ್ತುತ್ತಿಹನು. ಇವೆರಡೂ ತೀರದಲ್ಲಿ ಕರ್ಮಭೂಮಿಯಲ್ಲಿ ಮನುಷ್ಯಶರೀರವನೆತ್ತುತ್ತಲೇ ದೇವದೂತ ಯಮದೂತರು ಬಂದು ಕಾವುತ್ತಿಹರು. ಅಪ್ರದಕ್ಷಿಣನಿಗೆ ಸತ್ಕರ್ಮವೇ ಸೂಕ್ಷ್ಮಶರೀರಮಾಗಿ, ದುಷ್ಕರ್ಮವೇ ಕಾರಣಶರೀರಮಾಗಿಹುದು. ಪ್ರದಕ್ಷಿಣನಿಗೆ ದುಷ್ಕರ್ಮವೇ ಸೂಕ್ಷ್ಮಶರೀರಮಾಗಿಹುದು. ಅನುಭವಿಸಿಬಿಟ್ಚುದೇ ಕಾರಣವು, ಅನುಭವಿಸುವುದೇ ಸ್ಥೂಲವು, ಅನುಭವಿಸತಕ್ಕುದೇ ಸೂಕ್ಷ್ಮವು. ಇಂತು ಒಂದಕ್ಕೊಂದು ಸ್ಥೂಲ ಸೂಕ್ಷ್ಮ ಕಾರಣಂಗಳಾಗಿ, ಭೂತಭವಿಷ್ಯದ್ವರ್ತಮಾನ ಕಾಲಂಗಳೊಳಗೆ ಕೂಡಿ, ಸ್ವರ್ಗ ಮರ್ತ್ಯಪಾತಾಳಗಳಲ್ಲಿ ಜೀವನಿಗೆ ಭವರೂಪಮಾಗಿರ್ಪವು. ಇಂತು ಪ್ರದಕ್ಷಿಣಾಪ್ರದಕ್ಷಿಣಮಾಗಿ ದೇವಯಮದೂತರೊಡನೆ ಕೂಡಿ ತಿರುಗುತ್ತಿರ್ಪ ಜೀವಗಳಿಗೂ ಸ್ವರ್ಗ ನರಕಂಗಳಲ್ಲಿ ಸುಖದುಃಖಗಳನನುಭವಿಸುತ್ತಿರ್ಪ ಜೀವಗಳಿಗೂ ಮರ್ತ್ಯದಲ್ಲಿ ಸೃಷ್ಟಿ ಸ್ಥಿತಿ ಸಂಹಾರಂಗಳಂ ಹೊಂದುತ್ತಿರ್ಪ ಜೀವಗಳಿಗೂ ನಿಲುಕಡೆಯಿಲ್ಲದೆ ಇರುವುದು. ಇಂತಪ್ಪ ಸ್ವರ್ಗ ಮರ್ತ್ಯ ಪಾತಾಳಂಗಳಿಗೆ ಉತ್ತರಾಯಣವಾಗಿ ದಿನರೂಪಮಾಗಿ, ದಕ್ಷಿಣಾಯನಮಾಗಿ ಆಕಾಶಮಾರ್ಗದಲ್ಲಿ ನಕ್ಷತ್ರಯುಕ್ತಮಾಗಿ ಭ್ರಮಿಸುತ್ತಾ , ಆಯಾ ಲೋಕಂಗಳಿಗೆ ಆಯಾ ಕಾಲಂಗಳಂ ಸೃಷ್ಟಿಸುತ್ತಿರ್ಪನೇ ಸೂರ್ಯನು. ಇಂತು ಪ್ರಥಮದಲ್ಲಿ ಸುಖವೂ, ಅಂತ್ಯದಲ್ಲಿ ದುಃಖವೂ ಉಳ್ಳ ಅಪ್ರದಕ್ಷಿಣವೇ ಶಕ್ತಿಯು. ಪ್ರಥಮದಲ್ಲಿ ದುಃಖವೂ ಅಂತ್ಯದಲ್ಲಿ ಸುಖವೂ ಉಳ್ಳ ಪ್ರದಕ್ಷಿಣವೇ ಶಿವನು. ಇಂತಪ್ಪ ಶಿವಶಕ್ತ್ಯಾತ್ಮಕವೇ ಸಕಲ ಪ್ರಪಂಚವು. ಅಂತಪ್ಪ ಪ್ರಥಮಾನಂದವುಳ್ಳ ಶಕ್ತಿರೂಪಮಾದ ಪ್ರಪಂಚಸುಖವನ್ನು ಶಿವನಿಗರ್ಪಿಸಿ, ಅತ್ಯಾನಂದಜನಕಂಗಳಾದ ವ್ರತ ಪೂಜಾದಿಗಳನ್ನಾಚರಿಸುತ್ತಾ, ಯಮದೂತ ದೇವದೂತರ ಬಲೆಗೆ ಸಿಕ್ಕದೆ, ಮಧ್ಯದಲ್ಲಿರ್ಪ ಸೂರ್ಯಮಂಡಲವಂ ಭೇದಿಸಿ ತನ್ಮಾರ್ಗದಲ್ಲಿ ಗಮಿಸಿ, ತದುಪರಿ ಪ್ರಕಾಶಿಸುತ್ತಿರ್ಪ ಮುಕ್ತಿಸತಿಯಸಂಗದಲ್ಲಿ ಪರವಶಮಾಗಿರ್ಪುದೇ ಮೋಕ್ಷವು; ಶಿವನೇ ತಾನಪ್ಪನು. ಇಂತಪ್ಪ ಸತ್ಕರ್ಮಂಗಳನರಿದರ್ಪಿಸುತ್ತಾ ಚರಿಸುವಂತೆನ್ನಂ ಮಾಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.