Index   ವಚನ - 97    Search  
 
ಆಧಾರದಲ್ಲಿ ಆಚಾರಲಿಂಗಕ್ಕೆ ಗೃಹಸ್ಥದಳವೇ ಸ್ಥಾನವು, ಸ್ವಾಧಿಷ್ಠಾನದಲ್ಲಿ ಗುರುಲಿಂಗಕ್ಕೆ ಅಧ್ಯಾಪನದಳವೇ ಸ್ಥಾನವು, ಮಣಿಪೂರಕದಲ್ಲಿ ಶಿವಲಿಂಗಕ್ಕೆ ನೇತ್ರದಳವೇ ಸ್ಥಾನವು. ಇದು ರೂಪನಿಷ್ಠಮಾಗಿರ್ಪುದರಿಂ ಅಂತಪ್ಪ ರೂಪವೇ ಸದ್ರೂಪಮಾದ ಶಕ್ತಿಯು, ಅಂತಪ್ಪ ಸದ್ರೂಪಸಂಸರ್ಗದಿಂ ತಮೋಮಧ್ಯದಲ್ಲಿದ್ದು ಗ್ರಹಿಸುವುದರಿಂ ನೇತ್ರಮಧ್ಯದಲ್ಲಿರ್ಪ ನೀಲಿಮಕ್ಕೆ ತಾರಕವೆಂದು ಹೆಸರು, ಅದೇ ಶಿವನಿರುವ ಸ್ಥಾನಮಾದುದರಿಂ ನೇತ್ರೇಂದ್ರಿಯವೇ ಪ್ರಧಾನಮಾಯಿತ್ತು. ಆ ಈಶ್ವರನ ನಿಜಸ್ಥಾನವೇ ತಾರಕವು. ಅನಾಹತದಲ್ಲಿ ಜಂಗಮಲಿಂಗಕ್ಕೆ ತನುದಳವೇ ಸ್ಥಾನವು, ವಿಶುದ್ಧದಲ್ಲಿ ಪ್ರಸಾದಲಿಂಗಕ್ಕೆ ಪ್ರಮಾಣದಳವೇ ಸ್ಥಾನವು, ಆಜ್ಞೇಯದಲ್ಲಿ ಮಹಾಲಿಂಗಕ್ಕೆ ಪ್ರಾಣದಳವೇ ಸ್ಥಾನವು. ಪ್ರಾಣದಲ್ಲಿ ಹಂಕಾರವೇ ಬೀಜವು, ಪ್ರಮಾಣದಲ್ಲಿ ಅಕಾರವೇ ಬೀಜವು, ತನುವಿನಲ್ಲಿ ಕಕಾರವೇ ಬೀಜವು, ನೇತ್ರದಲ್ಲಿ `ಣ'ಕಾರವೇ ಬೀಜವು, ಅಧ್ಯಾಪನದಲ್ಲಿ ಯಕಾರವೇ ಬೀಜವು, ಗೃಹಸ್ಥದಲ್ಲಿ ವಕಾರವೇ ಬೀಜವು. ವಿಶುದ್ಧಾಜ್ಞೇಯಗಳಲ್ಲಿರ್ಪ `ಅಹಂ'ಕಾರಗಳೇ ಕಾರಣ, ಅದು ವಿಪರೀತಿಸಿ ಅನಾಹತಮಣಿಪೂರಕಗಳಲ್ಲಿರ್ಪ `ಕಣ'ವೇ ಸೂಕ್ಷ್ಮ, ಸ್ವಾಧಿಷ್ಠಾನಾಧಾರಗಳಲ್ಲಿರ್ಪ `ಯಶ'ವೇ ಸ್ಥೂಲ. ಕಾರಣರೂಪಮಾದ `ಅಹಂ'ಕಾರವೇ ಜೀವನು, ಶೋಭನರೂಪಮಾಗಿ ಅವಧಿಯಿಲ್ಲದೆ ಗಮಿಸುತ್ತಿರ್ಪ `ಕಣ'ವೇ ಬಿಂದು, ಗೃಹಸ್ಥಸ್ಥಾನದಲ್ಲಿ ಆಚಾರಮುಖದಲ್ಲಿ ದೊಡ್ಡಿತ್ತಾಗಿಹುದೇ ಯಶ, ಮಹದ್ಬೀಜವೇ ಪ್ರಾಣ, ಅದಕ್ಕೆ ಪ್ರಾಣವೇ ತನು, ಆ ತನುವಿಗೆ ನೇತ್ರವೇ ಪ್ರಧಾನ, ಅದಕ್ಕುಪದೇಶವೇ ಪರಿಶುದ್ಧಿ, ಗೃಹಸ್ಥಧರ್ಮವೇ ಆ ಶರೀರಕ್ಕೆ ಪ್ರಕಾಶವು. ಅಹಂಕಾರರೂಪಮಾದ ಜೀವನಿಗೆ ಇಷ್ಟರೂಪಮಾದ `ಕ್ಷ' ಕಾರವೇ ಸಂಹಾರ, ಆ `ಹ'ಕಾರರೂಪಮಾದ ಪ್ರಾಣಕ್ಕೆ ವಿಸರ್ಗರೂಪಮಾದ ನಿಗ್ರಹಸ್ಥಾನವೇ ಸಂಹಾರ, `ಶ'ಕಾರರೂಪಮಾದ ತನುವಿಗೆ `ಠ'ಕಾರರೂಪಮಾದ ವ್ಯಯವೇ ಸಂಹಾರ, `ಣ'ಕಾರರೂಪಮಾದ ನೇತ್ರಕ್ಕೆ `ಪ'ಕಾರರೂಪಮಾದ ಗೋಪ್ಯವೇ ಸಂಹಾರ, `ಯ'ಕಾರರೂಪಮಾದ ಅಧ್ಯಾಪನೆಗೆ `ಲ'ಕಾರರೂಪಮಾದ ಪರಿಗ್ರಹವೇ ಸಂಹಾರ, `ಶ'ಕಾರರೂಪಮಾದ ಗೃಹಸ್ಥಕ್ಕೆ `ಸ'ಕಾರರೂಪಮಾದ ಸಂನ್ಯಾಸವೇ ಸಂಹಾರ. ಅಂತಪ್ಪ ಸಂನ್ಯಾಸವೇ ತೂರ್ಯ, ಅಂತಪ್ಪ ತೂರ್ಯದಲ್ಲಿ ಜೀವನ್ಮುಕ್ತಿಯಪ್ಪ ಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.