ಚಿತ್ತಿಗೆ ಸತ್ತೇ ತಮೋಗುಣವು,
ಸತ್ತಿಗೆ ಚಿತ್ತೇ ಸತ್ವಗುಣವು.
ಅದೆಂತೆಂದೊಡೆ:
ಚಿತ್ತೆಂದರೆ ಪ್ರಕಾಶವು, ಸತ್ತೆಂದರೆ ಅಸ್ತಿತ್ವವು,
ಅದರಿಂದುಂಟಾದ ವಸ್ತುವೇ ಪ್ರಕಾಶಕ್ಕೆ ಮರೆಯಾಗಿ
ಛಾಯಾಮಾಯಾ ಹೇತುವಾಗಿರ್ಪುದರಿಂ
ಆ ಚಿತ್ತಿಗೆ ಆ ಸತ್ತೇ ತಮೋಗುಣಮಾಯಿತ್ತು.
ಅದರಿಂದುಂಟಾದ ವಸ್ತುವೇ ಚಿತ್ಪ್ರಭೆಯಾಗಿ
ಪ್ರಕಾಶಿಸುತ್ತಿರ್ಪುದರಿಂದಾ ಸತ್ತಿಗೆ ಚಿತ್ತೇ ಸತ್ವಗುಣವಾಯಿತ್ತು.
ಈ ಶಿವಶಕ್ತಿಗಳ ಕ್ರೀಡಾನಂದವೇ ರಜೋಗುಣಮಾಗಿ,
ಅದೇ ಸೃಷ್ಟಿಕರ್ತೃವಾಗಿ, ಕರ್ಮಕಾರಣಮಾಗಿ,
ಆ ಕರ್ಮಮುಖದಲ್ಲುತ್ಪನ್ನಮಾಗುವ ವಸ್ತುಗಳೂ ತಾನೆಯಾಗಿ,
ಸಕಲಪ್ರಪಂಚವೂ ಆ ಶಿವಶಕ್ತಿಗಳ
ನಟನೆಯಲ್ಲದೆ ಭಿನ್ನಮಿಲ್ಲಮಾಯಿತ್ತು.
ವಿಚಾರಿಸಲು ವಸ್ತು ಒಂದೇ,
ಆ ವಸ್ತುವಿನ ಗುಣವೇ ಶಕ್ತಿಯಾಯಿತ್ತು.
ಪುರುಷನ ಗುಣಾನುವರ್ತಿಯೇ ಸ್ತ್ರೀಯಾಗಿ,
ತನ್ಮುಖದಲ್ಲಿ ಸಂಸಾರಪ್ರಪಂಚವೆಲ್ಲವೂ ಉತ್ಪನ್ನವಾಗುವಂತೆ,
ಚಿತ್ತಿನ ಗುಣವಾದ ಸತ್ತಿನಿಂದ
ಸಕಲಪ್ರಪಂಚವು ಉತ್ಪನ್ನಮಾಗುತ್ತಿರ್ಪುದು.
ನಿನ್ನ ಗುಣಕ್ಕೆ ನೀನೇ ಗುಣವಾದುದರಿಂ
ಸಕಲಕ್ಕೂ ಕಾರಣಪದಾರ್ಥವು ನೀನೆಯಾಗಿ,
ಮಹಾಸಂಸಾರಿಯಾಗಿ ಭವನೆನಿಸಿರ್ಪ ನೀನು
`ಆತ್ಮಾ ವೈ ಪುತ್ರನಾಮಾಸಿ' ಎಂಬ ಶ್ರುತಿ ಪ್ರಮಾಣದಿಂ
ನೀನೇ ನಾನಾಗಿ ಜನಿಸಿರ್ಪುದನರಿತು,
ವಿಚಾರಿಸಿ ಪೊರೆಯದಿದ್ದರೆ ಮತ್ತಾರೆನಗೆ ದಿಕ್ಕು?
ಅದರಿಂ ನಿನಗೆ ಮೊರೆಯಿಡುತಿರ್ಪೆನು,
ನೀನೇ ನೋಡಿ ಕೂಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Cittige sattē tamōguṇavu,
sattige cittē satvaguṇavu.
Adentendoḍe:
Cittendare prakāśavu, sattendare astitvavu,
adarinduṇṭāda vastuvē prakāśakke mareyāgi
chāyāmāyā hētuvāgirpudariṁ
ā cittige ā sattē tamōguṇamāyittu.
Adarinduṇṭāda vastuvē citprabheyāgi
prakāśisuttirpudarindā sattige cittē satvaguṇavāyittu.
Ī śivaśaktigaḷa krīḍānandavē rajōguṇamāgi,
adē sr̥ṣṭikartr̥vāgi, karmakāraṇamāgi,
ā karmamukhadallutpannamāguva vastugaḷū tāneyāgi,
sakalaprapan̄cavū ā śivaśaktigaḷa
naṭaneyallade bhinnamillamāyittu.
Vicārisalu vastu ondē,
ā vastuvina guṇavē śaktiyāyittu.
Puruṣana guṇānuvartiyē strīyāgi,
tanmukhadalli sansāraprapan̄cavellavū utpannavāguvante,
Cittina guṇavāda sattininda
sakalaprapan̄cavu utpannamāguttirpudu.
Ninna guṇakke nīnē guṇavādudariṁ
sakalakkū kāraṇapadārthavu nīneyāgi,
mahāsansāriyāgi bhavanenisirpa nīnu
`ātmā vai putranāmāsi' emba śruti pramāṇadiṁ
nīnē nānāgi janisirpudanaritu,
vicārisi poreyadiddare mattārenage dikku?
Adariṁ ninage moreyiḍutirpenu,
nīnē nōḍi kūḍi salahā
mahāghana doḍḍadēśikāryaguruprabhuve.