Index   ವಚನ - 104    Search  
 
ಚಿತ್ತೇ ಶಿವನು, ಸತ್ತೇ ವಿಷ್ಣುವು ಎಂಬುದರಲ್ಲಿ ಪ್ರಮಾಣವೇನೆಂದರೆ: ಚಿತ್ತೇ ಜ್ಞಾನರೂಪು, ಸತ್ತೇ ಅಸ್ತಿರೂಪು. ಅಸ್ತಿತ್ವದಿಂ ಜ್ಞಾನವೃದ್ಧಿಯಪ್ಪುದಲ್ಲದೆ ಲಯಮಾಗದು, ಆ ಜ್ಞಾನದಿಂ ಬಾಹ್ಯಾಸ್ತಿತ್ವಮೆಲ್ಲ ನಷ್ಟಮಪ್ಪುದು, ನಿಜಾಸ್ತಿತ್ವವು ನಷ್ಟಮಾಗದಿರ್ಪುದರಿಂ ಪಲವಿಧ ಮನಂಗಳುತ್ಪನ್ನಮಾಗುವವು, `ಚಿತೀ ಸಂಜ್ಞಾನೇ' ಎಂಬ ಧಾತುವಿನಿಂ ಸುಜ್ಞಾನಮಾತ್ರವೇ ಶಿವನಲ್ಲದೆ, ಮಿಕ್ಕುದೆಲ್ಲ ಮಿಥ್ಯೆಯು. ಮಿಥ್ಯೆಯಂ ಸಂಹರಿಸುವುದೇ ಧರ್ಮವೆಂದುದು ಕಾಪಾಲಮತವು. ಆ ಸುಜ್ಞಾನದಲ್ಲಿರ್ಪ ಅಸ್ತಿತ್ವವೇ ಬ್ರಹ್ಮ, ಅದೇ ವಿಷ್ಣು, ಅದರಿಂ ಸಕಲಪ್ರಪಂಚವೂ ಉಂಟಾಗಿ, ಅದಕ್ಕೆ ಅಸ್ತಿತ್ವವೇ ಉಂಟಾಗಿ ವಿಭುವಾಗಿ, ಇಲ್ಲವೆಂಬುದು ಮಿಥ್ಯಾಭ್ರಮೆಯಾಗಿ, ಎಲ್ಲವೂ ಇದ್ದಂತಿರ್ಪುದೇ ವೈಷ್ಣವಮತವು. ಚಿತ್ತಿನಲ್ಲಿ ಸಂಹಾರತಮಸ್ಸು ಸ್ವಪ್ರಕಾಶದಿಂದುಂಟಾಗಿ, ಆ ತಮಸ್ಸಿನಿಂದಿಲ್ಲಮಾಗಿ ಕ್ಷಣೇ ಕ್ಷಣೇ ಪ್ರಪಂಚವುಂಟಿಲ್ಲಮಾಗುತ್ತಿರ್ಪುದೆಂಬುದೇ ಸಾಂಖ್ಯಮತವು. ಕರ್ಮದಿಂ ಭಿನ್ನಗಳಾದ ಜಾತಿಧರ್ಮವರ್ಣಾಶ್ರಮಂಗಳನರಿತು ದೇವತಾಪ್ರೀತಿಯಂ ಮಾಡುತ್ತಾ, ದೇವತಾಮುಖದಿಂ ಸಚ್ಚಿದಾನಂದರೂಪಮಾದ ಪರಮಾತ್ಮನಂ ತೃಪ್ತಿಗೊಳಿಸಿ, ಚತುರ್ವಿಧಫಲಂಗಳಂ ಹೊಂದಿರ್ಪುದೇ ತ್ರಯಿಮತವು. ಯಮನಿಯಮಾದ್ಯಷ್ಟಯೋಗಗಳಿಂದ ಸದ್ರೂಪಮಾದ ಶರೀರದಲ್ಲಿ ಚಿದ್ರೂಪಮಾದ ಪ್ರಾಣವಾಯುವನ್ನು ಮೂಲಾಧಾರದಿಂ ಬ್ರಹ್ಮಸ್ಥಾನದವರೆಗೂ ಬಂಧಿಸಿ, ಆ ಬ್ರಹ್ಮಸ್ಥಾನದಲ್ಲಿ ಚಿತ್ತು ಕೂಡೆ ಪರಮಾನಂದಮಯಮಾಗಿರ್ಪುದೇ ಯೋಗಮತವು. ಆ ಚಿನ್ಮಧ್ಯದಲ್ಲಿ ಸುತ್ತಿರ್ಪುದರಿಂ ಆ ಸದಾಶಿವನ ಗರ್ಭದಲ್ಲಿ ಸಕಲಪ್ರಪಂಚಮಿರ್ಪುದೆಂಬುದೇ ನಿಜವು, ಆ ಚಿತ್ತಿನ ನಿಜವೇ ಸತ್ತಲ್ಲದೆ, ಸತ್ತು ಬೇರೆ ಪದಾರ್ಥವಲ್ಲ. ತನ್ನಲ್ಲಿ ಹುಟ್ಟಿದ ಗುಣವು ತನ್ನಲ್ಲಿಯೇ ಪ್ರಕಾಶಮಾಗಿ, ತನ್ನಲ್ಲಿಯೇ ಅಡಗುತ್ತಿರ್ಪುದರಿಂದ ಅದು ತನ್ನ ಸ್ವಭಾವವಲ್ಲದೆ, ಭಿನ್ನವಲ್ಲವೆಂಬುದೇ ಅದ್ವೈತಮತವು. ಆ ಸತ್ತೇ ಸಕಲಪ್ರಪಂಚವು, ಚಿತ್ತೇ ಜ್ಞಾನವು, ಚಿದ್ರೂಪಮಾಗಿರ್ಪುವೇ ಇಂದ್ರಿಯಂಗಳು, ಸದ್ರೂಪಮಾಗಿರ್ಪುವೇ ವಿಷಯಂಗಳು. ಸದನುಭವಕ್ಕೆ ಚಿತ್ತೇ ಕಾರಣಮಾಗಿರ್ಪಂತೆ, ಆ ವಿಷಯಂಗಳಿಗೆ ಇಂದ್ರಿಯಜ್ಞಾನವೇ ಕಾರಣಮಾಗಿರ್ಪುದು. ಅವೆರಡರ ಸಂಗವೇ ಆನಂದವು, ಅಂತಪ್ಪ ಚಿದಾನಂದವಿಗ್ರಹವೇ ಮಹಾಲಿಂಗವು. ಅಂತಪ್ಪ ಮಹಾಲಿಂಗವು ಮಾನಸಾದಿಯಾದ ಷಡಿಂದ್ರಿಯಂಗಳೊಳ್ಚಿದಾನಂದಮೂರ್ತಿಯಾಗಿ, ಆಚಾರಾದಿ ಲಿಂಗಂಗಳೆನಿಸಿ, ಆ ವಿಷಯಮುಖದಿಂ ನಾಮ ರೂಪು ಕ್ರಿಯಗಳಲ್ಲಿ ಬಂದು, ಆ ವಿಷಯವೇ ಇಷ್ಟಮಾಗಿ, ತದ್‌ಜ್ಞಾನವೇ ಪ್ರಾಣವಾಗಿ, ಎರಡೂ ಏಕಮಾಗಿರ್ಪ ಆನಂದವೇ ಭಾವಮಾಗಿ, ಸಕಲಸುಖವೂ ಲಿಂಗಸುಖಮಾಗಿ, ಅಂಗಭೋಗವೆಂಬ ಮಿಥ್ಯಾಭ್ರಮೆಯಳಿದು, ಲಿಂಗಭೋಗವೇ ನಿಜಮಾಗಿ, ತಾನೆಂಬ ತಮೋಬಂಧವು ಅಖಂಡಿತಜ್ಞಾನಚಿತ್ಪ್ರಕಾಶದಿಂ ಖಂಡಿತಮಾಗಿ, ತನ್ನಂ ಮರೆತು ಲಿಂಗವನರಿದಿರ್ಪುದೇ ವೀರಶೈವಮತವು. ಅಂತಪ್ಪ ವೀರಶೈವಮತಮಹಿಮೆಯಲ್ಲಿ ಹೊಂದಿ ಹೊಂದದಂತೆ ಮಾಡಿ ಕೂಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.