Index   ವಚನ - 106    Search  
 
ಪ್ರಪಂಚವೆಂಬ ಮಹಾಕಮಲವು ಸತ್ವರೂಪಮಾದ ಜಾಗ್ರದಲ್ಲಿ ವಿಕಾಸವನ್ನೂ ತಮೋರೂಪಮಾದ ಸುಷುಪ್ತಿಯಲ್ಲಿ ಮುಕುಳನವನ್ನೂ ಹೊಂದುತಿರ್ಪುದು. ಸತ್ವರೂಪಮಾದ ಚಿತ್ತಿಗೆ ಕಮಲವೇ ಗುಣವು, ತಮೋರೂಪಮಾದ ಸತ್ತಿಗೆ ಸತ್ವವೇ ಗುಣವು. ಪ್ರಪಂಚಕಮಲವೇ ಸದ್ರೂಪು, ತದ್ವಾಸನೆಯೇ ಆನಂದರೂಪು, ತದನುಭವಕರ್ತೃವೇ ಚಿದ್ರೂಪು. ಇಂತಪ್ಪ ಕಮಲವು ಚಿದನುಭವ ನಿಮಿತ್ತ ದಿವಸದಲ್ಲಿ ವಿಕಸಿತಮಾಗಿ, ರಾತ್ರಿಯಲ್ಲಿ ಮುಕುಳಿತಮಾಗಿರ್ಪುದು. ಮುಕುಳನವು ಅಪವಿತ್ರವೂ ಅತಿವಿಕಸನವು ಪೂಜಾಯೋಗ್ಯಮಲ್ಲದುದೂ ಆದುದರಿಂದ ಈಷದ್ವಿಕಸನರೂಪ ಸಂಧಿಕಾಲವೇ ಪೂಜಾಯೋಗ್ಯವಾಯಿತ್ತು. ಹೃದಯಾದಿ ಇಂದ್ರಿಯಂಗಳೆಂಬ ಕಮಲಂಗಳು ನಿದ್ರೆಯಲ್ಲಿ ಮುಕುಳಿತಗಳಾಗಿಯೂ ಜಾಗ್ರದಲ್ಲಿ ವಿಕಸಿತಗಳಾಗಿಯೂ ಇರುತಿರ್ಪುದರಿಂದ, ಆ ಪ್ರಬೋಧಕಾಲವೇ ಪೂಜಾಯೋಗ್ಯವಾಯಿತ್ತು. ಅಂತಪ್ಪ ಕಾಲದಲ್ಲಿ ಸುವಾಸನಾಭರಿತಗಳಾದ ಇಂದ್ರಿಯಕಮಲಗಳಲ್ಲಿ ಪ್ರಪಂಚವಿಚಾರ ಮಲಿನಗುಣಗಳೆಂಬ ಭ್ರಮರಂಗಳು ಮುಟ್ಟುವುದಕ್ಕೆ ಮುನ್ನವೇ ಆಚಾರಾದಿಲಿಂಗಂಗಳಂ ಚಿತ್ತಾದಿ ಭಾವಹಸ್ತಂಗಳಿಂದಿರಿಸಿ, ಶಿವಾರ್ಪಣಸುಖದಿಂ ದ್ರವಿಸುತ್ತಿರ್ಪ ನಿರ್ಮಲಾನಂದ ಜಲದಿಂದಭಿಷೇಕಿಸಿ, ಆಯಾಲಿಂಗಂಗಳಿಗಾಯಾ ಪದಾರ್ಥಂಗಳಿಂದ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಂ ಮಾಡಿ, ಆ ಶಿವಪ್ರಸಾದವೇ ತಾನಾಗಿ, ಆ ಶಿವಪ್ರಸಾದಾನುಭಾವದೊಳಗೆ ಸಮರಸಮಾಗಿರ್ಪಾತನೆ ಪ್ರಸಾದಿಯು. ಅಂತಪ್ಪ ಪುರುಷನೇ ಸತ್ಕರ್ಮಯೋಗ್ಯನು. ಆತನು ಶಿವನಿರ್ಮಾಲ್ಯವು ಹೇಗೆ ನಮಸ್ಕಾರಯೋಗ್ಯಮಾಗಿ ಪವಿತ್ರವಾಗಿರ್ಪುದೊ ಹಾಗೆ ಪವಿತ್ರಮಾಗಿರ್ಪನು. ಆದುದರಿಂದಾಯಾ ಕಾಲಂಗಳಲ್ಲಾಯಾ ಸ್ಥಾನಂಗಳಲ್ಲಾಯಾ ಲಿಂಗಂಗಳಿಗಾಯಾ ವಿಷಯಪದಾರ್ಥಂಗಳಂ ಸಾವಧಾನಮಾರ್ಗದಿಂದರ್ಪಿಸಿ, ತತ್ಪ್ರಸಾದಾನುಭವಸುಖದೊಳಗೆ ಪರವಶನಾಗಿ ನನ್ನಂ ಮರೆತು ನಿನ್ನನ್ನರಿತಿರ್ಪಂತೆ ಮಾಡಿ ಕೂಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.