Index   ವಚನ - 105    Search  
 
ಚಿತ್ತಿಗೆ ಸತ್ತೇ ತಮೋಗುಣವು, ಸತ್ತಿಗೆ ಚಿತ್ತೇ ಸತ್ವಗುಣವು. ಅದೆಂತೆಂದೊಡೆ: ಚಿತ್ತೆಂದರೆ ಪ್ರಕಾಶವು, ಸತ್ತೆಂದರೆ ಅಸ್ತಿತ್ವವು, ಅದರಿಂದುಂಟಾದ ವಸ್ತುವೇ ಪ್ರಕಾಶಕ್ಕೆ ಮರೆಯಾಗಿ ಛಾಯಾಮಾಯಾ ಹೇತುವಾಗಿರ್ಪುದರಿಂ ಆ ಚಿತ್ತಿಗೆ ಆ ಸತ್ತೇ ತಮೋಗುಣಮಾಯಿತ್ತು. ಅದರಿಂದುಂಟಾದ ವಸ್ತುವೇ ಚಿತ್ಪ್ರಭೆಯಾಗಿ ಪ್ರಕಾಶಿಸುತ್ತಿರ್ಪುದರಿಂದಾ ಸತ್ತಿಗೆ ಚಿತ್ತೇ ಸತ್ವಗುಣವಾಯಿತ್ತು. ಈ ಶಿವಶಕ್ತಿಗಳ ಕ್ರೀಡಾನಂದವೇ ರಜೋಗುಣಮಾಗಿ, ಅದೇ ಸೃಷ್ಟಿಕರ್ತೃವಾಗಿ, ಕರ್ಮಕಾರಣಮಾಗಿ, ಆ ಕರ್ಮಮುಖದಲ್ಲುತ್ಪನ್ನಮಾಗುವ ವಸ್ತುಗಳೂ ತಾನೆಯಾಗಿ, ಸಕಲಪ್ರಪಂಚವೂ ಆ ಶಿವಶಕ್ತಿಗಳ ನಟನೆಯಲ್ಲದೆ ಭಿನ್ನಮಿಲ್ಲಮಾಯಿತ್ತು. ವಿಚಾರಿಸಲು ವಸ್ತು ಒಂದೇ, ಆ ವಸ್ತುವಿನ ಗುಣವೇ ಶಕ್ತಿಯಾಯಿತ್ತು. ಪುರುಷನ ಗುಣಾನುವರ್ತಿಯೇ ಸ್ತ್ರೀಯಾಗಿ, ತನ್ಮುಖದಲ್ಲಿ ಸಂಸಾರಪ್ರಪಂಚವೆಲ್ಲವೂ ಉತ್ಪನ್ನವಾಗುವಂತೆ, ಚಿತ್ತಿನ ಗುಣವಾದ ಸತ್ತಿನಿಂದ ಸಕಲಪ್ರಪಂಚವು ಉತ್ಪನ್ನಮಾಗುತ್ತಿರ್ಪುದು. ನಿನ್ನ ಗುಣಕ್ಕೆ ನೀನೇ ಗುಣವಾದುದರಿಂ ಸಕಲಕ್ಕೂ ಕಾರಣಪದಾರ್ಥವು ನೀನೆಯಾಗಿ, ಮಹಾಸಂಸಾರಿಯಾಗಿ ಭವನೆನಿಸಿರ್ಪ ನೀನು `ಆತ್ಮಾ ವೈ ಪುತ್ರನಾಮಾಸಿ' ಎಂಬ ಶ್ರುತಿ ಪ್ರಮಾಣದಿಂ ನೀನೇ ನಾನಾಗಿ ಜನಿಸಿರ್ಪುದನರಿತು, ವಿಚಾರಿಸಿ ಪೊರೆಯದಿದ್ದರೆ ಮತ್ತಾರೆನಗೆ ದಿಕ್ಕು? ಅದರಿಂ ನಿನಗೆ ಮೊರೆಯಿಡುತಿರ್ಪೆನು, ನೀನೇ ನೋಡಿ ಕೂಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.