Index   ವಚನ - 107    Search  
 
ನಾಸಿಕದಲ್ಲಿ ಸಂಚರಿಸುತಿರ್ಪ ಪ್ರಾಣವಾಯುವಿನ ಗಮನಾಗಮನವೇ ಶಕ್ತಿಸ್ವರೂಪು, ಅದೇ ರೇಚಕಪೂರಕಗಳಾಗಿರ್ಪುದು. ಇವೆರಡರ ಸಂಗವೇ ಕುಂಭಕವು. ಅದರ ಸಂಗದಲ್ಲುತ್ಪನ್ನಮಾದ ಮನಸ್ಸೇ ಸೃಷ್ಟಿಕರ್ತೃವಾದುದರಿಂ ಭ್ರೂಮಧ್ಯವೇ ಸ್ಥಾನವಾಯಿತ್ತು. ಅದಕ್ಕೆ ಪೂರಕವೇ ನಿಗ್ರಹಕರ್ತೃವೂ ರೇಚಕವೇ ಸ್ಥಿತಿಕರ್ತೃವೂ ಆದುದರಿಂದ ತತ್ಸಂಗದಲ್ಲಿ ತತ್ತದ್ವಿಷಯಗ್ರಹಣರೂಪಗಳಾದ ಪಂಚಜ್ಞಾನಂಗಳು ಮನಸ್ಸಿನಲ್ಲಿ ಒಂದೆಯಾಗಿ ಪ್ರಕಾಶಿಸುತ್ತಿರ್ಪುದರಿಂದಾ ಮನವೇ ಮಹವೆನಿಸಿಕೊಂಡಿತ್ತು. ಅಂತಪ್ಪ ಮಹಾಜ್ಞಾನಕ್ಕೆ ತಾನಂಗಮಾಗಿರ್ಪ ಮನವೇ ಮಹಾಲಿಂಗವಾಯಿತ್ತು. ಅಂಗಕ್ಕೆ ಪ್ರಾಣವೇ ಚೈತನ್ಯಮಾದಂತೆ, ಇಂದ್ರಿಯಂಗಳಿಗೆ ಮನಸ್ಸೇ ಚೈತನ್ಯವು, ಲಿಂಗಂಗಳಿಗೆ ಮಹಿಮೆಯೇ ಚೈತನ್ಯವು. ಅಂತಪ್ಪ ಮಹಿಮೆಯುಳ್ಳ ಮನವೇ ಮಹಾಲಿಂಗವು. ಅಂತಪ್ಪ ಮಹಾಲಿಂಗಧಾರಣಶಕ್ತಿಯುಳ್ಳ ಪುರುಷನೇ ಶಿವಭಕ್ತನು. ಆ ಲಿಂಗವಂ ಪ್ರಪಂಚಸುಕ್ಷೇತ್ರದಲ್ಲಿಟ್ಟು ನಿಯಮಪೂರ್ವಕವಾಗಿ ಪೂಜಿಸುತಿರ್ಪಾತನೇ ದೇವತಾಪುರುಷನು. ಅದನಪವಿತ್ರಸ್ಥಾನದಲ್ಲಿಟ್ಟು ತನ್ನ ಭೋಗವನನುಭವಿಸುತ್ತಿರ್ಪಾತನೇ ಪತಿತನು, ಅವನೇ ಭವಿಯು. ಒಳಗೂ ಹೊರಗೂ ಲಿಂಗರೂಪಮಾಗಿ ಪರಿಣಾಮಿಸಿ ಆ ಲಿಂಗಮಧ್ಯದಲ್ಲಿರ್ಪ ತನ್ನಂಗಭೋಗವೇ ಲಿಂಗಭೋಗಮಾಗಿ ನಾಹಂಭ್ರಮೆಯಳಿದಿರ್ಪಾತನೆ ಲಿಂಗೈಕ್ಯನು. ಅಂತಪ್ಪ ಲಿಂಗೈಕ್ಯಾನಂದಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.