Index   ವಚನ - 109    Search  
 
ಆದಿಬಿಂದುವೇ ಶೂನ್ಯಮಾದುದರಿಂ ಸಂಹಾರರೂಪಮಾಯಿತ್ತು. ಇದು ಜೀವನ ಆದಿಮಧ್ಯಾವಸಾನಗಳನಾಶ್ರೈಸಿರ್ಪುದರಿಂ ಹಂ ಆಯಿತ್ತು. ವಿಸರ್ಜನರೂಪಮಾದ ಹಕಾರವು ನಿಜಶೂನ್ಯದೊಳ್ಪ್ರತಿಫಲಿಸಲು ತದ್ರೂಪಮಾದ ಸಕಾರಮಾಯಿತ್ತು. ಸಂಹಾರರೂಪಮಾದ ಬಿಂದುವೆಂಬ ದರ್ಪಣದಲ್ಲಿ ಸೃಷ್ಟಿಸ್ಥಿತಿರೂಪಮಾದ ಮಾಯಾಛಾಯೆಯೇ ಜೀವನಮಾಯಿತ್ತು. ಛಾಯಾಜನಿತವೇ ಭಾವಮಾಯಿತ್ತು, ಆ ಭಾವವೇ ಜೀವನಿಷ್ಠ ಧರ್ಮವು. ಅದು ಪ್ರತಿವಸ್ತುವಂ ಪ್ರಕಾಶಪಡಿಸುತ್ತಿರ್ಪುದು, ಸೃಷ್ಟಿಸ್ಥಿತಿರೂಪಮಾದ ಪ್ರತಿವಸ್ತುವಿನಿಂ ಸಂಹಾರದಲ್ಲಿ ತಾನುದಿಸಿ ಪ್ರತಿಯಳಿಯಲು, ತನ್ನ ಜನ್ಮಸ್ಥಾನದಲ್ಲಿ ತಾಂ ಲಯಮಪ್ಪುದೇ ಮೋಕ್ಷವು. ಆ ಹಮ್ಮೇ ತಾನೆಂಬಹಂಕಾರವು, ಅಲ್ಲಿ ತೋರುತ್ತಿರ್ಪ ಛಾಯಾಜೀವನೇ ತನ್ನದೆಂಬಲ್ಲಿ, ತತ್ಸಂಧಿಕಾಲದಲ್ಲಿ ತೋರ್ಪ ಮಮತ್ವವೇ ಮನವು, ಆ ಜೀವನ ಕಾರ್ಯಕ್ಕದೇ ಕಾರಣಮಾಗಿರ್ಪುದು, ಅದು ಜೀವನಿಷ್ಠಧರ್ಮವಾದ ಭಾವದೊಳಗೆ ಕೂಡಿ ಪಾತ್ರಾಪಾತ್ರಗಳಂ ವಿಚಾರಿಸುತ್ತಿರ್ಪುದೇ ಬುದ್ಧಿಯು, ಆ ವಸ್ತುವಂ ತಿಳಿವ ವಿವೇಕವೇ ಚಿತ್ತವು, ಈ ಮನೋಬುದ್ಧಿ ಚಿತ್ತಾಹಂಕಾರಗಳೇ ಜೀವನ ಅಂತಃಕರಣಂಗಳು. ನಾದರೂಪಿಯಾದ ಜೀವನು ಅಕ್ಷರಸ್ವರೂಪಿಯಾದುದರಿಂ ಮಂತ್ರದಿಂ ಪರಿಶುದ್ಧನಾಗಿ, ಕ್ರಿಯಾಮುಖದಲ್ಲಿ ಕರ್ಮಕ್ಕೆ ಬಂದು, ಜ್ಞಾನಮುಖದಲ್ಲಿ ಮಹದರ್ಥಕ್ಕೆ ಕಾರಣನಾಗಿಹನು. ಅವನು ಆ ಜ್ಞಾನಭಾವದೊಳ್ಕೂಡಿ, ಅಕ್ಷರವಂ ಮಹತ್ತಾಗಿ ಪ್ರಕಾಶಿಸಿ, ಆ ಅಕ್ಷರವಂ ಬಿಟ್ಟು ಅದರರ್ಥವಂ ಭಾವಮುಖದಲ್ಲಿ ಕೊಂಡು, ಗೂಢಮಾಗಿ ಮಿಥ್ಯಾರೂಪಮಾಗಿರ್ಪ ಅರ್ಥವಂ ಪ್ರಕಾಶಿಸಿ, ನಿಜಸಿದ್ಧಾಂತವಂ ಮಾಡಿ, ಸಂಶಯಮುಖದಲ್ಲಿ ಪುನರಾಗಮನಕ್ಕೆ ಬಾರದೆ, ನಿಜಮಾಗಿ ಪರಮಾನಂದದೊಳಗೆ ಹೊಂದಿ, ಪ್ರಕಾಶಿಸಿ ಸಕಾರವೆಂಬ ಛಾಯಾಯೋಗವನಳಿಯಲು, ಉಳಿದ ಪದಾರ್ಥವೇ ಮುಕ್ತಿಯು. ಅಂತಪ್ಪ ಮುಕ್ತಿಸಾಮ್ರಾಜ್ಯಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.