Index   ವಚನ - 110    Search  
 
ಸೃಷ್ಟಿ ಕರ್ತುವಾದ ಸ್ತ್ರೀತ್ವಾಧಿದೇವತೆಯಾದಾತನೆ ಬ್ರಹ್ಮನು. ಸ್ಥಿತಿಕರ್ತುವಾದ ಪುರುಷಾಧಿದೇವತೆಯಾದ ಆದಿಪುರುಷನೆ ವಿಷ್ಣು. ಇಂತಪ್ಪ ಸ್ತ್ರೀ ಪುರುಷವೇತ್ತಿಗಳುಭಯಪಾಶ್ರ್ವಂಗಳ ಉಳ್ಳ ಲಿಂಗವೇ ನಪುಂಸಕ. ಪುಂಸ್ತ್ವ ಸ್ತ್ರೀ ಸುಖವನರಿಯದು, ಸ್ತ್ರೀತ್ವ ಪುಂಸುಖವನರಿಯದು. ಇಂತಪ್ಪ ಸ್ತ್ರೀ ಪುರುಷ ಸುಖ ತಾನೆಯಾಗನುಭವಿಸುವುದೇ ಲಿಂಗ. ಸ್ತ್ರೀ ಪುರುಷರಲ್ಲಿರ್ಪ ಸೃಷ್ಟಿ ಸ್ಥಿತಿ ಕರ್ತೃತ್ವ ತಾನೆಯಾಗಿ, ನಪುಂಸಕನಾಗಿ, ಸ್ತ್ರೀ ಪುರುಷ ಸುಖವನನುಭವಿಸುತ್ತ, ತಾ ತೋರದೆ, ತನ್ನ ಸಂಹಾರಕೃತ್ಯವ ತೋರಿಸುತ್ತ, ಸ್ತ್ರೀ ಪುಂ ಭಾವವೆಲ್ಲವನ್ನು ತಿಳಿವುತ್ತಿರ್ಪುದರಿಂ ಸರ್ವಜ್ಞತ್ವದ ಪ್ರಕಟವ ಮಾಡುತ್ತಿರ್ಪುದೆ ಮಹಾಲಿಂಗ. ಪುರುಷಯಂತ್ರ ಕರ್ತುವಾಗಿಹುದೆ ಲಿಂಗ; ಸ್ತ್ರೀಯಂತ್ರ ಕರ್ತುವಾಗಿಹುದೆ ಪುರುಷನು. ಕರ್ಮಕರ್ತುವೆ ಬ್ರಹ್ಮನು, ಜ್ಞಾನಕರ್ತುವೆ ವಿಷ್ಣು, ಈ ಉಭಯ ಕರ್ತೃತ್ವವೇ ಲಿಂಗ. ಪರಮಾತ್ಮನ ನಾಲ್ಕು ಮುಖವೆ ಬ್ರಹ್ಮನು, ಐದನೆಯ ಮುಖವೆ ವಿಷ್ಣು , ಇಂತು ಐದು ಮುಖದಲ್ಲಿ ಸಾಕಾರವ ತೋರಿ, ಆ ಸಾಕಾರದ ಸೃಷ್ಟಿ ಸ್ಥಿತಿಯೂ ತಾನೆಯಾಗಿ ತೋರಿ ಅಂತಮರ್ುಖದಲ್ಲಿ ಸರ್ವಜ್ಞನಾಗಿ, ಅಂತರ್ಮುಖದಲ್ಲಿ ತಾನು ಹೇಗೆ ಗೂಢವೋ ತನ್ನ ಸಂಹಾರ ಕೃತ್ಯವ ಹಾಗೇ ಗೂಢವ ಮಾಡಿ ತೋರುತಿರ್ಪಾತನೆ ಮಹಾಲಿಂಗ. ಶರೀರದಲ್ಲಿ ಸ್ತ್ರೀಪುರುಷ ಭೇದ ಕಾಣಿಸುತ್ತಿಹುದು. ಜೀವನಲ್ಲಿ ಅಭೇದಮಾಗಿ, ಒಂದೇಯಾಗಿಯಿಹುದರಿಂ ಅದೇ ನಪುಂಸಕ. ತದ್ಧರ್ಮ ಮನಸ್ಸಿನಲ್ಲಿ ಕಾಣಿಸುತ್ತಿಹುದು, ಇದೇ ಸಂಸಾರ, ಅದೇ ವಿರಕ್ತಿ. ಸದ್ಯೋಜಾತ ವಾಮದೇವಾಘೋರ ತತ್ಪುರುಷ ರೂಪಮಾಗಿರ್ಪ ಪೃಥ್ವಿಯಪ್ಪು ತೇಜೋವಾಯುಗಳೆ ಬ್ರಹ್ಮಸ್ವರೂಪು. ಈಶಾನರೂಪಮಾದ ಆಕಾಶವೆ ವಿಷ್ಣು ಸ್ವರೂಪು. `ವಿಷ್ಣುರ್ ವ್ಯಾಪ್ತಾ' ಯೆಂಬ ಧಾತ್ವರ್ಥಮುಳ್ಳುದೆ ವಿಷ್ಣುಶಬ್ದಮಾದುದರಿಂ ವಿಷ್ಣುಮಯವೇ ಆಕಾಶ; ಈ ಪಂಚಬ್ರಹ್ಮವೆ ಜಗತ್ತು. ಅಂತಪ್ಪ ಜಗತ್ತಿಗೆ ಚೈತನ್ಯಮಾಗಿ ಅಂತರ್ಮಯಮಾಗಿರ್ಪ ಆತ್ಮನೆ ಸದಾಶಿವನು. ಕರಣೇಂದ್ರಿಯದಲ್ಲಿ ಭಾವರೂಪಮಾಗಿ ಜ್ಞಾನೇಂದ್ರಿಯದಲ್ಲಿ ನೇತ್ರರೂಪಮಾಗಿ, ಕರ್ಮೆಂದ್ರಿಯದಲ್ಲಿ ಗುಹ್ಯರೂಪಮಾಗಿ, ಆದಿ ಮಧ್ಯಾವಸಾನಗಳಲ್ಲಿ ಉತ್ತಮೇಂದ್ರಿಯರೂಪನಾಗಿರ್ಪಾತನೆ ವಿಷ್ಣು; ಮಿಕ್ಕಿನಿಂದ್ರಿಯಂಗಳೆ ಬ್ರಹ್ಮವು. ಆ ಗುಹ್ಯೇಂದ್ರಿಯದಲ್ಲಿ ಆನಂದ ಬಿಂದುರೂಪಮಾಗಿ ನೇತ್ರೇಂದ್ರಿಯದಲ್ಲಿ ಜ್ಞಾನಕಳಾರೂಪಮಾಗಿ ಭಾವೇಂದ್ರಿಯದಲ್ಲಿ ನಿಜನಾದರೂಪಮಾಗಿ ಸತ್ಯಜ್ಞಾನಾನಂದ ಮಹಿಮೆಯಂ ಪ್ರಕಟವಂ ಮಾಡುತ್ತ ಜೀವಾತ್ಮನಾಗಿ ಹೃದಯದಲ್ಲಿರ್ದು ಸೃಷ್ಟಿಸುತ್ತ ಅಂತರಾತ್ಮನಾಗಿ ಲಲಾಟದಲ್ಲಿರ್ದು ನೋಡಿ ರಕ್ಷಿಸುತ್ತ ಪರಮಾತ್ಮನಾಗಿ ಭಾವಬ್ರಹ್ಮ ಸ್ಥಾನದಲ್ಲಿರ್ದು ತಮೋ ಮುಖದಲ್ಲಿ ಸಂಹರಿಸುತ್ತಿರ್ಪಾತನೆ ಪರಮಾತ್ಮನು. ಇಂತಪ್ಪ ಭೇದತ್ರಯಮುಳ್ಳ ಅಖಂಡಾತ್ಮನೆ ಶಿವನು. ಎಲ್ಲದು ಉಳ್ಳುದೆ ಪೃಥ್ವಿ; ಕೇವಲಮುಳ್ಳುದೆ ಜಲ; ಧೂಮ ಮಾತ್ರಮುಳ್ಳುದೆ ಅಗ್ನಿ. ತಾ ನಿರಾಕಾರಮಾಗಿ, ತನ್ನ ಗುಣವ ಸಾಕಾರವಾಗಿ ತೋರುತಿರ್ಪುದೆ ವಾಯು. ತಾ ಸಾಕಾರಮಾಗಿ ತನ್ನ ಗುಣವ ಸಾಕಾರ ನಿರಾಕಾರಮಾಗಿ ತೋರುವುದೆ ಆಕಾಶ. ತಾನ್ಕೇವಲವು ನಿರಾಕಾರಮಾಗಿ ತನ್ನ ಗುಣವು ನಿರಾಕಾರಮಾಗಿ ತನ್ನಲ್ಲಿ ಮತ್ತೊಂದುಯೇನೂ ಇಲ್ಲದೆ ಪೃಥ್ವಿಗೆ ಹೊರಗೆ ಏನೂ ಏನಿಲ್ಲವೋ ಹಾಗೆ ಆತ್ಮನ ಒಳಗೆ ಏನೂ ಇಲ್ಲ. ತನ್ನೊಳಗೆ ಏನೂ ಇಲ್ಲದೆ ತನ್ನ ಹೊರಗೆ ಎಲ್ಲ ಉಂಟಾಗಿರ್ಪುದೆ ಲಿಂಗವೆಂದರಿದು ಸಂದಣಿಯೊಳಗಿರ್ಪ ಭವದಂದುಗಕಲಸಿ ಯಾರೂ ಇಲ್ಲದೆ ಅಭೇದ್ಯಮಾಗಿ ನಿರ್ಭಯಮಾಗಿರ್ಪ ನಿನ್ನ ಹೃದಯ ಮಧ್ಯದಲ್ಲಿ ನನ್ನನಿಟ್ಟು ಕಾಲ ಕಾಮರ ಭಯ ಕಳದುಳುಹಿ ಸಲಹು ಕಂಡಾ ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೇ.