Index   ವಚನ - 112    Search  
 
ಜ್ಞಾನಪಂಚೇಂದ್ರಿಯ, ಕರ್ಮಪಂಚೇಂದ್ರಿಯಂಗಳಲ್ಲಿ ಜ್ಞಾನೇಂದ್ರಿಯ ಮೂರಕ್ಕೆ ದ್ವೈಧೀಭಾವ, ಎರಡಕ್ಕೆ ಏಕತ್ವ. ಕರ್ಮೇಂದ್ರಿಯಂಗಳಲ್ಲಿ ಎರಡಕ್ಕೆ ದ್ವೈಧೀಭಾವ, ನೂರಕ್ಕೆ ಏಕತ್ವವಾದ ಪರಿಯೆಂತೆಂದಡೆ: ಜ್ಞಾನವೇ ಸೂಕ್ಷ್ಮ, ಕರ್ಮವೆ ಸ್ಥೂಲ, ಸ್ಥೂಲ ಕಾರಣಮಾಗಿರ್ಪುದೆ ಅಗ್ನಿ, ವಾಯುವುಗಳಾದುದರಿಂ ತ್ವಗ್ರಸನಗಳು ಕರ್ಮೆಂದ್ರಿಯಬದ್ಧಮಾಗಿ ತತ್ಕಾರಣಮಾಗಿರ್ಪುದರಿಂ ಏಕತ್ವಮಾಯಿತ್ತು. ಪಾಣಿ ಪಾದಗಳು ಜ್ಞಾನೇಂದ್ರಿಯಬದ್ಧಮಾಗಿ ತತ್ಕಾರಣಮಾಗಿರ್ಪುದರಿಂ ದ್ವಿವಿಧ ಮಾಯಿತ್ತೆಂದಡೆ ಕರ್ಮೆಂದ್ರಿಯದಲ್ಲಿ ಗುದವೆ ಪೃಥ್ವಿಮೂಲ, ಗುಹ್ಯವೆ ಜಲಮೂಲ, ಕರ್ಮೆಂದ್ರಿಯ ಬದ್ಧವಾದ ಜಿಹ್ವೆಯೇ ಅಗ್ನಿಮೂಲ, ತ್ವಗುವೆ ವಾಯುಮೂಲ, ವಾಕ್ಕೇ ಆಕಾಶಮೂಲ. ಜ್ಞಾನೇಂದ್ರಿಯಂಗಳಲ್ಲಿ ಶ್ರೋತ್ರವೆ ಆಕಾಶ ಮೂಲ, ಘ್ರಾಣವೆ ವಾಯುಮೂಲ, ನೇತ್ರವೆ ತೇಜಮೂಲ, ಆ ಜ್ಞಾನೇಂದ್ರಿಯ ಬದ್ಧವಾದ ಪಾಣಿಯೆ ಜಲಮೂಲ, ಪಾದವೆ ಪೃಥ್ವಿಮೂಲವಾದುದರಿಂ ಪೃಥ್ವಿಯಪ್ಪುರೂಪಮಾದ ಪಾದ ಪಾಣಿಗಳು ಜೀವಬದ್ಧವಾದ ಶರೀರದೋಪಾದಿಯಲ್ಲಿ ಶ್ರೋತ್ರ ನೇತ್ರಂಗಳನನುಸರಿಸಿ ದ್ವೈಧೀಭಾವಮಾಯಿತ್ತು. ವಾಯುವಗ್ನಿಮೂಲವಾದ ತಗ್ಜಿಂಹೆಗಳು ಶರೀರಬದ್ಧಮಾದ ಜೀವನೋಪಾದಿಯಲ್ಲಿ ಕರ್ಮೆಂದ್ರಿಯಬದ್ಧಮಾಗಿ, ಗುದಗುಹ್ಯ ಕಾರಣಮಾಗಿ ಏಕತ್ವಮಾಯಿತ್ತು. ಜ್ಞಾನೇಂದ್ರಿಯಕ್ಕೆ ವಾಸನಾಮೂಲವಾದ ವಾಯುವೆ ಕಾರಣವಾಯಿತ್ತು. ಕರ್ಮೆಂದ್ರಿಯಕ್ಕೆ ವಾಕ್ಯಮೂಲಮಾದ ಆಕಾಶವೆ ಕಾರಣಮಾಯಿತ್ತು; ಇಂತಪ್ಪ ಸ್ಥೂಲರೂಪವಾದ ಕರ್ಮೆಂದ್ರಿಯಂಗಳೇಕತ್ವ. ಸೂಕ್ಷ್ಮರೂಪಮಾದ ಜ್ಞಾನೇಂದ್ರಿಯಂಗಳು ದ್ವಿತ್ವಮಾದಕಾರಣಮೆಂತೆಂದಡೆ: ಸ್ಥೂಲಶರೀರ ಮರ್ತ್ಯದಲ್ಲಿ ಸುಖದುಃಖಂಗಳ ತಾನೇಕತ್ವವಾಗನುಭವಿಸುವುದರಿಂ ಸೂಕ್ಷ್ಮ ಶರೀರ ಸ್ವರ್ಗ ನರಕಂಗಳಲ್ಲಿ ಪಾಪ ಪುಣ್ಯಂಗಳ ದ್ವೈಧೀಭಾವಮಾಗನುಭವಿಸುತ್ತಿರ್ಪುದರಿಂ ಕರ್ಮಕ್ಕೆ ಏಕತ್ವವೂ, ಜ್ಞಾನಕ್ಕೆ ದ್ವೈಧೀಭಾವಮಾಯಿತ್ತು. ಜ್ಞಾನೇಂದ್ರಿಯಂಗಳೆಂಟು ಭೇದಮಾಗಿ ಕರ್ಮೆಂದ್ರಿಯಗಳೇಳುಭೇದಮಾದುದರಿಂ ಕೂಡಾ ಹದಿನೈದು ಕಳೆಯಾಯಿತ್ತು; ಹದಿನಾರನೆಯ ಕಳೆಯ ಸದಾಶಿವನು ಧರಿಸಿರ್ಪುದರಿಂ ಆ ಕಳೆ ಗೂಢಮಾಗಿ ಕಾರಣವ ಹೊಂದುತಿರ್ಪುದು. ಸ್ತ್ರೀಗಳಿಗೆ ಗುಹ್ಯವೇ ದ್ವೈಧೀಭಾವವ ಹೊಂದಿರ್ಪುದರಿಂ ಷೋಡಶ ಕಳೆಯಾಯಿತ್ತು. ಆ ಸ್ತ್ರೀಯ ಹದಿನಾರನೆಯ ಕಳೆಯೆ ಸೃಷ್ಟಿಧಾರಣಾಶಕ್ತಿಯುಳ್ಳುದು. ಅದೇ ಅಧೋಮುಖಮಾದುದರಿಂ ಪ್ರಪಂಚಮೂಲ ಪುರುಷನ ಹೊಂದಿ, ಹದಿನಾರನೆಯ ಕಳೆಯೆ ಸಂಹಾರಧಾರಣಶಕ್ತಿಯುಳ್ಳ ಜ್ಞಾನಾಕ್ಷಿ. ಅದು ಊರ್ಧ್ವಮುಖಮಾಗಿರ್ಪುದರಿಂ ಪರಮಮೂಲ. ಇದು ನಿರಾಕಾರವ ಗ್ರಹಿಸಿ ಸಾಕಾರಮಾಡುತ್ತಿರ್ಪುದು. ಅದು ಸಾಕಾರವ ಗ್ರಹಿಸಿ ನಿರಾಕಾರವ ಮಾಡುತ್ತಿರ್ಪುದು. ಇದು ಸೂತಕಮಯ, ಅದು ಶುಚಿಮಯ. ಇದು ಶರೀರಮೂಲಮಾಗಿ ಕರ್ಮವನನುಸರಿಸಿರ್ಪುದು. ಅದು ಮನೋಮೂಲಮಾಗಿ ವಾಕ್ಕನನುಸರಿಸಿರ್ಪುದು. ಇಂತಪ್ಪ ಮನೋವಾಕ್ಕಾಯ ಕರ್ಮಂಗಳಿಗೆ ಕರ್ಮದಲ್ಲಿ ಭಕ್ತಿ, ಶರೀರದಲ್ಲಿ ಶಕ್ತಿ, ವಾಕ್ಯದಲ್ಲಿ ಯುಕ್ತಿ, ಮನದಲ್ಲಿ ಮುಕ್ತಿಯುಳ್ಳ ಮಹಾಪುರುಷನೆ ಮಹಾಲಿಂಗವೆ ನಿನಗೆ ಪರಮ ಪ್ರಸಾದಾನುಭವಮಾದ ಭುಕ್ತಿಯಾಗುತ್ತಿರ್ಪೆನು. ಅಂತಪ್ಪ ಲಿಂಗಾನುಭಾವಮುಳ್ಳ ಮಹಾಪುರುಷನೆ ವಿರಕ್ತನು. ಆತನೆ ಮಹ [ತ್ತ]ತ್ವದಲ್ಲಿ ಸಂಚರಿಸುವ ಜಂಗಮ. ಅಂತಪ್ಪ ಜಂಗಮ ಪೂಜೆಯಿಂ ಕಾರಣರೂಪಮಾದ ಸಂಸಾರ ಶುದ್ಧಿಯಾಗಿ, ಗುರುವಿನಿಂ ಶರೀರ ಶುದ್ಧಿಯಾಗಿ, ಲಿಂಗದಿಂ ಪ್ರಾಣಶುದ್ಧಿಯಾಗಿ, ಆ ಲಿಂಗ ಪ್ರಾಣಂಗಳಿಗೆ ವಾಸನಾ ರಸನಂಗಳೆ ಸಂಬಂಧ ಕಾರಣಮಾಗಿ, ಗುರು ಶರೀರಂಗಳಿಗೆ ರೂಪ ಸ್ಪರ್ಶನಂಗಳೆ ಸಂಬಂಧಂಗಳಾಗಿ, ಜಂಗಮ ಸಂಸಾರಂಗಳಿಗೆ ತತ್ವಜ್ಞಾನಂಗಳೆ ಸಂಬಂಧಮಾಗಿ, ಜಂಗಮವೇ ಸಂಸಾರವಾಗಿ, ಶರೀರವೆ ಗುರುವಾಗಿ, ಲಿಂಗವೆ ಪ್ರಾಣಮಾಗಿ, ಜಂಗಮದಲ್ಲಿ ಹೊಂದಿ ಸಂಸಾರವ ಮರೆತು, ಗುರುಸೇವೆಯಿಂ ಶರೀರ ಮರತು ಲಿಂಗದಲ್ಲಿ ನೆರೆದು ತನ್ನ ತಾ ಮರದಿರ್ಪುದೆ ಲಿಂಗೈಕ್ಯ ಅಂತಪ್ಪ ನಿತ್ಯಾನಂದ ಲಿಂಗೈಕ್ಯ ಸುಖವನೆನಗಿತ್ತು ಸಲಹಾ ಮಹಾಘನದೊಡ್ಡ ದೇಶಿಕಾರ್ಯ ಪ್ರಭುವೆ