Index   ವಚನ - 115    Search  
 
ಈಶಾನ್ಯ ಕರಕಮಲ ಕೈಲಾಸ ಸ್ಥಾಯಿಯಾಗಿರ್ಪ ಲಿಂಗಮೆಂಬ ಬ್ರಹ್ಮ ಮಂತ್ರದಿಂದಾವಾಹನಕ್ಕೆ ಬಂದು ವಾಸನೆಯಲ್ಲುಪಸಂಹಾರಮಾಗಿರ್ಪುದು. ಆ ವಾಸನೆಯೇ ಜ್ಞಾನರೂಪಮಾಗುತ್ತಿರ್ಪುದೆಂತೆಂದಡೆ: ಪೂರ್ವ ಕರ್ಮವಾಸನೆಯು ಇಹದಲ್ಲಿ ಜ್ಞಾನರೂಪಮಪ್ಪಂತೆ ಆ ಲಿಂಗಕ್ಕೆ ಸ್ಪರ್ಶನದಲ್ಲಿ ಆವಾಹನ, ನೇತ್ರದಲ್ಲಿ ಉಪಸಂಹಾರ ಶ್ರೋತ್ರದಲ್ಲಿ ಆವಾಹನ, ಮನದಲ್ಲಿ ಉಪಸಂಹಾರ. ಮಂತ್ರಮುಖದಲ್ಲಿ ಕೂಡಿ ವಾಸನಾಮುಖದಲ್ಲಿ ಹೃದಯದಲ್ಲಿ ಪ್ರಕಾಶಿಸುತ್ತಿರ್ಪುದೆ ಪ್ರಾಣಲಿಂಗ. ಸ್ಪರ್ಶನ ಕ್ರಿಯಾ ಮುಖದಲ್ಲಿ ಕೂಡಿ ನೇತ್ರವಿಷಯಮಾಗಿ ಕಣ್ಣಿನಲ್ಲಿ ಕಟ್ಟಿದಂತಿರ್ಪುದೆ ಇಷ್ಟಲಿಂಗ. ಶ್ರೋತ್ರ ವಿಷಯದಲ್ಲಿ ಕೇಳಿ ಆ ಲಿಂಗದ ಮನದಲ್ಲಿ ವಿಚಾರಿಸುತ್ತಿರ್ಪುದೇ ಭಾವಲಿಂಗ. ಮಂತ್ರವಾಸನೆಯುಳ್ಳುದೆ ಗುರು, ಕ್ರಿಯಾರೂಪುಳ್ಳುದೆ ಲಿಂಗ, ತತ್ವವಿಚಾರಮುಳ್ಳುದೆ ಜಂಗಮ. ಗುರುಮಂತ್ರದಲ್ಲಿ ಹುಟ್ಟಿ ಆಚಾರ ಹೊಂದಿರ್ಪುದೆ ಪ್ರಾಣಲಿಂಗ. ಜಂಗಮಕರ್ಮದಲ್ಲಿ ಹುಟ್ಟಿ ಶಿವನಲ್ಲಿ ಹೊಂದಿರ್ಪುದೆ ಇಷ್ಟಲಿಂಗ. ಪ್ರಸಾದದಲ್ಲಿ ಹುಟ್ಟಿ ಮಹದಲ್ಲಿ ಹೊಂದಿರ್ಪುದೆ ಭಾವಲಿಂಗ. ಆಚಾರವಾಸನೆಯಲ್ಲಿ ನಿಜಮಹದ್ವಿಚಾರದಲ್ಲಿ ಜ್ಞಾನಕ್ರಿಯಾ ರೂಪದಲ್ಲಿ ಆನಂದ. ಇಂತಪ್ಪ ಜ್ಞಾನಾನಂದದಿಂ ನಿಜವಾಸನೆಯನೆ ಜೀವನನುಭವಿಸುತ್ತಿರ್ಪುದರಿಂ ವಾಸನೆಯೇ ಸತ್ಯಮಾಯಿತ್ತು. ಇಂತೊಂದು ಲಿಂಗವೆ ಇಷ್ಟದಿ ನವಪ್ರಕಾರದಲ್ಲಿ ಹೆಚ್ಚಿ, ಆ ಲಿಂಗದೊಳಗೆ ಬೆರದಲ್ಲಿ ಆ ಒಂಬತ್ತು ಶೂನ್ಯಮಾಗಿ, ಒಂದು ನಿಜಮಾಗಿ, ಆ ಒಂಬತ್ತಕ್ಕೆ ಆ ಒಂದೆ ಚೈತನ್ಯವಾಗಿ, ಆ ಒಂದಕ್ಕೆ ಆ ಒಂಬತ್ತೆ ಆಧಿಕ್ಯವಾಗಿ, ಆ ಒಂಬತ್ತರೊಳಗೆ ಬೆರದು ಒಂದು ಹತ್ತಾಗಿರ್ಪುದೆಂತೆಂದಡೆ; ಆ ಲಿಂಗವೆ ತನ್ನ ಇಷ್ಟ ಪದಾರ್ಥದೊಳಗೆ ಬೆರದಲ್ಲಿ [ಅದೆ] ಇಷ್ಟಲಿಂಗ. ಜೀವನೊಳಗೆ ಸಂಬಂಧಿಸಿದಲ್ಲಿ ಅದೆ ಪ್ರಾಣಲಿಂಗ. ಭಾವದೊಳಗೆ ಕೂಡಿದಲ್ಲಿ ಅದೆ ಭಾವಲಿಂಗ. ವಾಸನಾಮುಖದಲ್ಲಿ ಕೂಡಿದಲ್ಲಿ ಅದೆ ಆಚಾರಲಿಂಗ. ಮಂತ್ರರುಚಿಯಲ್ಲಿ ಸಂಬಂಧಿಸಿದಲ್ಲಿ ಅದೆ ಗುರುಲಿಂಗ. ರೂಪಿನಲ್ಲಿ ವೇದಿಸಿದಲ್ಲಿ ಅದೇ ಶಿವಲಿಂಗ. ಸ್ಪರ್ಶನದಲ್ಲಿ ಪ್ರಸನ್ನವಾದಲ್ಲಿ ಅದೆ ಜಂಗಮಲಿಂಗ. ಶಬ್ದದೊಳಗೆ ನೆರದಲ್ಲಿ ಅದೆ ಪ್ರಸಾದಲಿಂಗ. ಮನದಲ್ಲಿ ಸಮರಸಮಾದಲ್ಲಿ ಅದೆ ಮಹಾಲಿಂಗ. ಇಂತಪ್ಪ ಲಿಂಗವೆ ಸಕಲ ಪ್ರಪಂಚದಲ್ಲಿ ತಾನೊಂಬತ್ತು ಬಗೆಯಾಗಿ ತೋರಿ, ಆ ಒಂಬತ್ತು ಶೂನ್ಯಮಾಗಿ, ಆ ಒಂದೇ ನಿಜಮಾಗಿ, ದಶಾಧಿಕ್ಯದಿಂದನಂತಂಗಳಾಗಿ ತೋರುತ್ತಿರ್ಪ ಮಹತ್ತು ಮಹವಾಗಿರ್ಪ ಲಿಂಗಮಹಿಮೆಯಿಂ ಇಷ್ಟದಲ್ಲಿ ಸ್ಥೂಲವಡಗಿ, ಪ್ರಾಣದಲ್ಲಿ ಸೂಕ್ಷ್ಮವಡಗಿ, ಭಾವದಲ್ಲಿ ಕಾರಣವಡಗಿ ಸೃಷ್ಟಿ ಸ್ಥಿತಿ ಸಂಹಾರಂಗಳುಡುಗಿ, ಪುಷ್ಪವಾಸನೆಯೂ ತಿಲತೈಲವೂ ಬೆರದು ಅಭೇದ ಪ್ರಕಾಶವಾಗಿ ಮರಳುದಲೆಯಿಲ್ಲದಿರ್ಪಂತೆ, ಲಿಂಗವಾಸನೆಯೊಳಗೆ ಅಂಗಕಳೆಯಾಗಿರ್ಪಂತೆ ಜೀವನು ಬೆರದು ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡ ದೇಶಿಕಾರ್ಯಪ್ರಭುವೆ.