ಪರಬ್ರಹ್ಮ ಸೃಷ್ಟಿರೂಪವಾಗಿ ಜನಿಸುವುದಲ್ಲ
ಸಂಹಾರರೂಪಮಾಗಿ ಲಯಮಪ್ಪುದಲ್ಲ,
ಸ್ಥಿತಿರೂಪಮಾಗಿರ್ಪುದು.
ಅದರಿಂ ವಿಷ್ಣುವೆ ಪರಬ್ರಹ್ಮವೆಂಬ
ವೈಷ್ಣವ ಕುಜ ಖಂಡ[ನ]ಪರಶು
ಮಹಿಮೆಯಂ ಪೇಳ್ವೆನೆಂತೆಂದಡೆ:
ಮನಸ್ಸಿಗೆ ಸತ್ವವೆ ಗುಣವಾಯಿತ್ತು.
ಆ ಸತ್ವಕ್ಕೆ ತಮಸ್ಸೇ ಗುಣಮಾಗಿರ್ಪುದರಿಂ
ಶಿವನೆ ಸತ್ವಮಯಮಾದ ಶುದ್ಧ ಸ್ಫಟಿಕ ಸಂಕಾಶದಿಂ
ವಿಶ್ವ ನಟನೆಯಿಂ ನಟಿಸುತ್ತಿರ್ಪುದರಿಂ
ಶಿವನೆ ಸತ್ವ ಸ್ವರೂಪು; ವಿಷ್ಣುವೆ ತಮೋ ರೂಪು.
ಆ ತಮಸ್ಸೇ ಮಿಥ್ಯ; ಸತ್ವವೇ ನಿಜ.
ಆ ಸತ್ಯ ಮಿಥ್ಯಂಗಳೆರಡೆಯಲ್ಲದೆ
ಬೇರೆ ಮತ್ತೊಂದಿಲ್ಲದೆ ಒಂದನೊಂದನಾಶ್ರಯಿಸಿ
ಒಂದಕೊಂದು ಗುಣಮಾಗಿ,
ಅದಕ್ಕದೆ ದೇಹ ಪ್ರಾಣಗಳಾಗಿ
ಪ್ರಕೃತಿ ಪರಮರಾಗಿರ್ಪುದರಿಂ
ಆ ವಿಷ್ಣುವಿಗೆ ಶಿವನೆ ಗುಣ,
ಆ ಶಿವನಿಗೆ ವಿಷ್ಣುವೆ ಗುಣಮಾದುದರಿಂ
ಶಿವನೇ ತಮೋಗುಣಮಾದ
ವಿಷ್ಣುವೆ ಸತ್ವಗುಣಮಾದನೆಂತೆಂದಡೆ:
ಸತ್ವ ಮೂರ್ತಿಯಾದ ಪುರುಷನಂ
ತಮೋರೂಪಮಾದ ಸ್ತ್ರೀಸಂಗದಿಂ ಹೀನನಾಗಿರ್ಪಂತೆ
ಆ ಸ್ತ್ರೀ ಪುರುಷಸಂಗದಿಂ ಮಂಗಳಮಯ
ಪತಿವ್ರತಾ ಮಹಿಮೆಯುಳ್ಳಂತೆ
ಆ ತಥ್ಯ ಮಿಥ್ಯಂಗಳೆ ಹರ ಹರಿ ರೂಪಂಗಳಾಗಿಹವು.
ಅದರಿಂ ಉಂಟಾಗಿರ್ಪ ವಸ್ತುವೊಂದೆ ಶಿವನು.
ಇಲ್ಲಮಾಗಿರ್ಪ ಪ್ರಕೃತಿಯೆ ವಿಷ್ಣು.
ಈ ತಥ್ಯ ಮಿಥ್ಯ ಸಂಗದಿಂ
ಉಂಟಿಲ್ಲಮಾಗಿರ್ಪ ಸಕಲ ಪ್ರಪಂಚವೆ ಬ್ರಹ್ಮ ಪುರುಷನು.
ತಾ ಸಕಲಕ್ಕೂ ಕರ್ತನಾಗಿರ್ದು ಲೀಲಾಬದ್ಧತ್ವದಿಂ
ಅರ್ಧ ಸತಿಯು ಅರ್ಧ ಸುತನಾಗಿ
ಸ್ವಪ್ರಕಾಶ ನಷ್ಟಮಾಗಿ ಅಸ್ವತಂತ್ರನಾಗಿರ್ಪಂತೆ
ನಿಜಮಾಗಿರ್ಪ ವರ್ತಮಾನ ಭೂತ ಭವಿಷ್ಯಂಗಳಿಂ
ಕಾಣಿಸದಿರ್ಪಂತೆ, ಸ್ಥಿತಿ ವಿಷಮ ವಿಭಾಗದ ಮಧ್ಯದಲ್ಲಿ
ವರ್ತಮಾನವಾಗಿ, ಸ್ಥಿತಿ ರೂಪವಾಗಿ ನಿಲ್ಲುವ ವಸ್ತುವೊಂದು
ಸಮಗಣನಾ ವಿಭಾಗದಲ್ಲಿ ನಿಲ್ಲುವುದು ಶೂನ್ಯ.
ಅದೇ ಶಿವಶಕ್ತಿ ಸ್ವರೂಪು.
ಎರಡೂ ಕೂಡಿದಲ್ಲಿ ದಶಸ್ಥಾನಮಾಗಿ ಹೆಚ್ಚುತಿರ್ಪುದು.
ಆ ಶೂನ್ಯರೂಪಮಾದ ಒಂಬತ್ತು
ಆ ಶೂನ್ಯ ಮುಖದಲ್ಲೇ ಹೆಚ್ಚಿ ಎರಗುತ್ತಿರ್ಪುದು.
ಹೆಚ್ಚು ಕುಂದಿಲ್ಲದೆ ಒಂದಾಗಿರ್ಪ ನಿಜ ಸತ್ವವೆ ಶಿವನು
ಕಾಲತ್ರಯಂಗಳಲ್ಲಿ ಉದಯಾಸ್ತಮಾನ ಕಾಲಂಗಳೆ
ಬ್ರಹ್ಮ ವಿಷ್ಣು ರೂಪಮಾಗಿ, ಮಧ್ಯಕಾಲವೆ
ಮಹೇಶ್ವರ ರೂಪಮಾಗಿರ್ಪಂತೆ,
ಸ್ಥಿತಿರೂಪಮಾದ ಶಿವನು, ಸೃಷ್ಟಿ ಸಂಹಾರರೂಪಮಾದ
ಬ್ರಹ್ಮ ವಿಷ್ಣುವಿನೊಳಗೆ ಕೂಡಿ ಪಂಚವಕ್ತ್ರನಾದ.
ತನ್ನ ನಾಲ್ಕು ಮುಖವೆ ಬ್ರಹ್ಮನಾಗಿ,
ಒಂದು ಮುಖವೆ ವಿಷ್ಣುವಾಗಿ, ಮೋಕ್ಷಮಯವಾದ
ಅಂತರ್ಮುಖವೆ ತಾನಾಗಿ ದೇಹದ ಮರೆಯಲ್ಲಿ
ಪ್ರಕಾಶಿಸುತಿರ್ಪ ಜೀವನಂತೆ,
ಬ್ರಹ್ಮ ವಿಷ್ಣುಗಳೆಂಬ ಮಿಥ್ಯಾ ಪ್ರಕೃತಿಯ ಮರೆಯಲ್ಲಿ
ಪ್ರಕೃತಿ ಚೇತನನಾಗಿರ್ಪಾತನೆ ಶಿವನು.
ಉಂಟಾದುದಿಲ್ಲ ಮಾಡುತಿರ್ಪುದೆ ಸಂಹಾರ,
ಇಲ್ಲದದುಂಟು ಮಾಡುತಿರ್ಪುದೆ ಸೃಷ್ಟಿ,
ಇದ್ದಂತಿರ್ಪುದೆ ಸ್ಥಿತಿ.
ಸ್ಥಿತಿಯೇ ಸತ್ವ, ಆ ಸತ್ವಕ್ಕೆ ಸಂಹಾರವೆ ಶಕ್ತಿ ,
ಆ ಸಂಹಾರವೇ ತಾಮಸ, ಆ ತಾಮಸಕ್ಕೆ ಸೃಷ್ಟಿಯೇ ಶಕ್ತಿ,
ಆ ಸೃಷ್ಟಿಯೇ ಅಹಂಕಾರ, ಅದಕ್ಕೆ ಸತ್ವವೇ ಶಕ್ತಿ ,
ಶಿವನಿಗೆ ಮಹಾದೇವಿ ರೂಪಮಾದ ವಿಷ್ಣುವೆ ಶಕ್ತಿಯಾದಂತೆ,
ಆ ವಿಷ್ಣುವಿಗೆ ಐಶ್ವರ್ಯರೂಪಮಾದ ಬ್ರಹ್ಮನೆ ಶಕ್ತಿಯಾದಂತೆ,
ಆ ಬ್ರಹ್ಮನಿಗೆ ವಿವೇಕರೂಪಮಾದ ಶಿವನೆ ಶಕ್ತಿ.
ಐಶ್ವರ್ಯ ಶಕ್ತಿಗಳಿಗೆ ಲಯಮಲ್ಲದೆ
ವಿವೇಕಕ್ಕೆ ಲಯಮಿಲ್ಲದಿರ್ಪುದರಿಂ
ಸ್ಥಿತಿಯೇ ಶಿವನಾಯಿತ್ತು.
ಆ ಪ್ರಕೃತಿ ಮುಖದಲ್ಲಿ ಪ್ರಕಾಶಿಸುತ್ತಿರ್ಪ
ಸ್ವಧರ್ಮಮುಳ್ಳ ಪರಮಾತ್ಮನ ಕಿರಣಂಗಳೆ
ಆ ಪ್ರಕೃತಿ ಬದ್ಧದಿಂ ಪ್ರಕೃತಿಮಯಮಾದ,
ಸೃಷ್ಟಿ ಸಂಹಾರ ರೂಪವಾದ ಶರೀರದಲ್ಲಿ
ಸ್ಥಿತಿರೂಪಮಾದ ಜೀವರಾಗಿರ್ಪವು.
ಸ್ವಭಾವಗುಣಮುಳ್ಳ ತೇಜೋರೂಪಮಾದ ಸೂರ್ಯಕಿರಣಂಗಳೆ
ಉದಕ ಮುಖದಲ್ಲಿ ಪ್ರಕಾಶಿಸಿ,
ಜಡರೂಪಮಾಗಿ ಭಿನ್ನಮುಖದಲ್ಲಿ ವರ್ಷಧಾರೆಗಳಾಗಿ,
ಅಪವಿತ್ರಮಾಗಿ, ಪೃಥ್ವಿಮುಖದಲ್ಲಿ ಬಹುತ್ವವೇಕತ್ವಮಾಗಿ,
ಪ್ರವಹಿಸುವಲ್ಲಿ ಪವಿತ್ರಮೆನಿಸಿ ಮತ್ತೆ
ಆ ಸೂರ್ಯ ಕಿರಣಂಗಳಿಂ ಲಯವ ಹೊಂದುತ್ತಿರ್ಪಂತೆ,
ಜೀವನು ಶರೀರಧಾರಿಯಾಗಿ ಸೂರ್ಯಕಿರಣಂಗಳೆಂತಂತೆ
ಸತ್ವ ಸ್ವರೂಪನಾದ ಸಂಹಾರ ಕರ್ತನಾದ
ಶಿವನಿಂದಲೆ ಲಯಮಪ್ಪವು.
ಮನೋವಿಕಾರ ಮನದಿಂದಲೇ,
ಸೃಷ್ಟಿ ಸ್ಥಿತಿ ಸಂಹಾರಂಗಳಾಗುತ್ತಿರ್ಪಂತೆ,
ಆ ಪರಮಾತ್ಮ ಸ್ವರೂಪಮಾದ ತದ್ವಿಕಾರಮಾಗಿರ್ಪ ಜೀವಂಗಳು
ಆ ಪರಮಾತ್ಮನಿಂದಲೇ ಸೃಷ್ಟಿ ಸ್ಥಿತಿ ಸಂಹಾರಂಗಳಾಗುತ್ತಿರ್ಪವು.
ಒಂದು ಬಾಗಿಲಲ್ಲಿ ಹೊರಟು, ಅನಂತ ಮುಖಗಳಲ್ಲಿ ಸಂಚರಿಸಿ,
ತಿರಿಗಿ ಬಂದ ಬಾಗಿಲೊಳಗೆ ಹೊಕ್ಕು ನಿಜಸ್ಥಾನವ ಸೇರುತ್ತಿರ್ಪಂತೆ,
ಸಂಹಾರರೂಪಮಾದ ತಮೋಮುಖದಲ್ಲಿ ಹೊರಟು
ಅನಂತ ಮುಖದಲ್ಲಿ ಸಂಚರಿಸಿ ಬಳಲಿ ಬಾಯಾರಿ
ತಿರಿಗಿ ಸಂಹಾರ ಮುಖದಲ್ಲೆ ನಿಜವ ಹೊಂದುತ್ತಿರ್ಪುದರಿಂ
ಜೀವನ ಸಂಹಾರ ಮೋಕ್ಷ ಅಂತಪ್ಪ ಸ್ವಪ್ರಕಾಶ ಪರಮಾನಂದ
ಮಂಗಳಮಯ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೆ.