Index   ವಚನ - 118    Search  
 
ಸೃಷ್ಟಿ ಕರ್ತುವೇ ಸ್ತ್ರೀ, ಸ್ಥಿತಿ ಕರ್ತನೇ ಪುರುಷನು, ಎರಡರ ಸಂಗವೇ ಸಂಹಾರಕರ್ತನು. ಆ ಎರಡೂ ಏಕಮಾಗಿರ್ಪುದೆ ದಂಪತಿತ್ವ. ಅದೇ ವಿಧ್ಯುಕ್ತಮಾದ ಮಂಗಳಮಯ ಕಲ್ಯಾಣ. ಅದೆ ಶಿವ ಸ್ವರೂಪಮಾದುದರಿಂ ವಿವಾಹ ಪ್ರತಿಷ್ಠೆಯೆ ಲಿಂಗಪ್ರತಿಷ್ಠಾಫಲ. ಆ ಫಲ ಅಕ್ಷಯರೂಪಮಾಗಿ ಪ್ರಪಂಚದಲ್ಲಿ ಅವಧಿರಹಿತಮಾಗಿ ಪೆಚ್ಚುತಿರ್ಪುದು. ಅಂತಪ್ಪ ಸ್ತ್ರೀ ಸೃಷ್ಟಿಕಾರಣಮಲ್ಲದೆ ಸೃಷ್ಟಿಯೇ ತಾನಲ್ಲದಂತೆ, ಪುರುಷನು ಸ್ಥಿತಿಕಾರಣನಲ್ಲದೆ ಸ್ಥಿತಿಯೇ ತಾನಲ್ಲದಂತೆ, ದಂಪತಿಗಳು ವ್ಯಯಕಾರಣರಲ್ಲದೆ ವ್ಯಯವೇ ತಾನಲ್ಲದಂತೆ, ಸೃಷ್ಟಿ ಸ್ಥಿತಿ ಸಂಹಾರ ಕರ್ತರು ತದ್ಗುಣಕಾರಣರಲ್ಲದೆ ಆ ಗುಣಗಳೇ ತಾವಲ್ಲ. ದೇವನು ಕಲ್ಪಿತ ಸ್ಥಿತಿಯ ಸಂಹರಿಸುವನಲ್ಲದೆ ನಿಜವ ಸಂಹರಿಸುವನಲ್ಲ. ವಿಷ್ಣುವು ಸಂಹಾರ ಕಲ್ಪಿತಗಳ ರಕ್ಷಿಸುವನಲ್ಲದೆ ನಿಜವ ರಕ್ಷಿಸುವನಲ್ಲ. ಬ್ರಹ್ಮನು ಸಂಹಾರ ಸ್ಥಿತಿಯ ಸೃಷ್ಟಿಸುವನಲ್ಲದೆ ನಿಜವ ಸೃಷ್ಟಿಸುವನಲ್ಲ ಅದರಿಂ ಲಯಮಾಗದುದೆ ಸತ್ಯ, ಸ್ಥಿತಿಯಾಗದುದೆ ಮಿಥ್ಯಮಾಯಿತು. ಅಗ್ನಿಯೆ ದಾಹಕ ಗುಣ ನಿಜದಲ್ಲಿ ಶಾಂತಿಯ ಹೊಂದಿರ್ಪಂತೆ, ಈಶ್ವರ ಸಂಹಾರ ಗುಣ ಸತ್ಯದಲ್ಲಿ ಶಾಂತಿಯ ಹೊಂದಿರ್ಪುದು. ಸಹಜಮಾಗಿರ್ಪುದರಿಂ ಮಿಥ್ಯಾಮಯದಿಂ ನಿನ್ನ ಸಂಹಾರ ಮುಖದಲ್ಲಿ ಸಿಕ್ಕಿ ಸಾವ ಕೋಟಲೆಯ ಬಿಡಿಸಿ ಸತ್ಯಮಯನಾಗಿ ನಿನ್ನ ಪರಮ ಶಾಂತಿಯೊಳಗೆ ಬೆರದು ಭೇದದೋರದಿರ್ಪಂತೆ ಮಾಡಿ ಕೂಡಿ ಸಲಹಾ ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೆ.