Index   ವಚನ - 119    Search  
 
ಕಾಮವೆಂತು ಗುಹ್ಯದಲ್ಲಿ ಚಲನವೋ ಕ್ರೋಧವಂತು ಜಿಹ್ವೆಯಲ್ಲಿ ಚಲನ. ಸ್ಖಾಲಿತ್ಯದಲ್ಲಿ ಅಪವಿತ್ರವಾದ ಶರೀರಮೆಂತು ಸ್ನಾನಯೋಗ್ಯವೋ ಕ್ರೋಧ ಸ್ಖಲನಕಾಲದಲ್ಲಿ ಸೂಕ್ಷ್ಮ ಶರೀರ ಮಂತ್ರ[ಸ್ನಾನ]ಯೋಗ್ಯ. ಇಂತು ಕಾಮ ಕ್ರೋಧಾದಿ ಷಡ್ವರ್ಗಂಗಳು ಸಕಲ ಗುಣಂಗಳು ಬೇರೆ ಬೇರೆ ತಂದು ರೂಪ ಭಾವಂಗಳನ್ನು ಶರೀರಮುಖದಲ್ಲಿ ತೋರುತ್ತ ಜೀವನನಾವರಿಸಿರ್ಪವೆಂತೆಂದರೆ: ಲಹರಿಯ ಕೊಂಡಲ್ಲಿ ಪಿಶಾಚ ಗ್ರಹಣದಲ್ಲಿ ರೋಗೋಲ್ಬಣದಲ್ಲಿ ತಲ್ಲಕ್ಷಣಂಗಳು ತೃಟಿ ಕಾಲವು ಎಡೆಬಿಡದೆ ಆಚ್ಛಾದಿಸಿರ್ದುದರಿಂ ಆ ವಸ್ತುವಿನಲ್ಲಿ ನಿಜ ಪ್ರಕಾಶ ಕಾಣಿಸದೆ ಆವರಣ ಮುಖದಿಂ ಭಿನ್ನ ಜೀವನಾಗಿರ್ಪುದು. ಅಂತಪ್ಪ ಜೀವನ ಕರಣವೆ ಮನ. ಆ ಮನದಲ್ಲಿ ಹುಟ್ಟಿ ಜೀವನಲ್ಲಿ ಹೊಂದಿ ಸ್ವ ಪ್ರಕಾಶ ವಿವೇಕದಲ್ಲಿ ಲಯವ ಹೊಂದುತಿರ್ಪುದು. ಅದರಿಂ ಮನೋ ಲಯಕ್ಕೆ ಆವರಣ ನಷ್ಟ. ಆವರಣ ನಷ್ಟವೆ ಸ್ವ [ಪ್ರ]ಕಾಶ. ಅಂತು ಸ್ವಪ್ರಕಾಶ ಮನೋಗುಣಂಗಳಿಂ ನಷ್ಟವಾಗಿ ಕಾಣಿಸದೆ ಲಹರಿ ಮೈಯ್ಯುಂಡ ಪುರುಷನು ಆ ಲಹರಿಯಿಳಿದು ಸ್ವಭಾವಮಾಗಿರ್ಪುದೆ ವೇದನೆಯಾಗಿರ್ಪಂತೆ, ಆವರಣವೆ ಅನುಭವಮಾಗಿರ್ಪ ಜೀವನು ಆವರಣ ಲಯಮಪ್ಪ ತೂರ್ಯಾವಸ್ಥೆಯೆ ಮರಣವೇದನೆಯಾಗಿರ್ಪುದು. ಅದು ತನ್ನ ಸ್ವಭಾವವೆಂದು ತಿಳಿದು ನಿಜವ ಹೊಂದದೆ ಆವರಣ ಮುಖದಲ್ಲಿ ಬೀಳುತಿರ್ಪ ಭವವನನುಭವಿಸುತ್ತಿರ್ಪುದು. ಅಂತು ಪರಮನೆ ತನ್ನಿಂದಲೆ ಸೃಷ್ಟಿಸ್ಥಿತಿಗಳಧಿಕಮಾಗಿ ಅವೆ ತನಗೆ ಆವರಣಂಗಳಾಗಿ ಇರ್ಪವು. ಶಕ್ತಿ ರಹಿತವಾದ ಬಾಲ್ಯದಲ್ಲಿ ಶರೀರ ಪವಿತ್ರಮಾಗಿರ್ಪಂತೆ ಆ ಶಕ್ತಿ ಬಲಿಯೆ ಶರೀರ ಮಪವಿತ್ರಮಾಗಿ, ಕರ್ಮಮುಖದಲ್ಲಿ ಬೀಳುತ್ತಿರ್ಪುದರಿಂ ಆ ಶಕ್ತಿಯಪವಿತ್ರ, ಆ ಶಿವನೆ ಪವಿತ್ರ. ಆವರಣರೂಪಮಾದ ಸಾಕಾರದಲ್ಲಿ ಶಕ್ತಿಯದಲ್ಲದೆ ನಿರಾಕಾರದಲ್ಲಿ ತಾನೊಬ್ಬನೆ. ಸಾಕಾರದಲ್ಲಿ ತಾನೈದು ಬಗೆಯಾಗಿ, ತಾ ಧರಿಸಿರ್ಪ ಶಕ್ತಿ ಮೂರು ಬಗೆಯಾಗಿ, ಸೃಷ್ಟಿ ಸ್ಥಿತಿ ಸಂಹಾರಮುಳ್ಳ ಮುಮ್ಮೊನೆಯುಳ್ಳ ಶಕ್ತಿಯಂ ಪರಿಗ್ರಹಿಸಿ ತಾ ಚೈತನ್ಯರೂಪನಾಗಿ ಆ ಶಿವನು ಪರಿಗ್ರಹಿಸಿದಲ್ಲಿ ಚೈತನ್ಯಮಾಗಿ ಬಿಟ್ಟಲ್ಲಿ ಜಡಮಾಗಿ ಆ ವಸ್ತುವಿನ ಆಧೀನಮಾಗಿರ್ಪುದು. ಅಂತಪ್ಪ ಸೃಷ್ಟಿ ಸ್ಥಿತಿ ಸಂಹಾರ ಶಕ್ತಿಯುಳ್ಳ ಶಿವನೆ ಪರಬ್ರಹ್ಮ. ತನ್ನ ಶಕ್ತಿ ಮೂರು ಭೇದಮಾಗಿ ತಾನೈದು ಭೇದಮಾಗಿರ್ಪುದೆ ಅಷ್ಟಮೂರ್ತಿತ್ವದಳರೂಪಮಾಗಿಹುದು ನಿರಾಕಾರ ವಿಕಸನವೆ ಸಾಕಾರ ಸಂಕುಚಿತವೆ ನಿರಾಕಾರ ತಾಂ ನಿರಾಕಾರಮಹಲ್ಲಿ ಸೃಷ್ಟಿ ಸಂಹಾರರೂಪಮಾದ ಐಶ್ವರ್ಯ ಶಕ್ತಿಗಳು ಮಿಥ್ಯಮಾಗಿ ಆ ವಿವೇಕ ಶಕ್ತಿ ತಾನೆ ಶಿವನಾಗಿರ್ಪುದು. ಸರಸ್ವತಿಯೆ ಶಿವನಸ್ವರೂಪವೆಂತೊ, ಅಂತು ರುದ್ರನೆ ಪರಬ್ರಹ್ಮಮೆಂಬುದು ನಿಜ. ವಿವೇಕವೆ ಶಿವನು, ಶಿವನೆ ವಿವೇಕಮಾಗಿರ್ಪುದರಿಂ ಸರ್ವಜ್ಞನೆ ಶಿವನಾದನು. ವಿವೇಕವೆಂದರೆ ವಿವಿಚ್ಯ ಜ್ಞಾನ. ಆ ವಿವೇಕದಿಂದಲೇ ಸಕಲವು ಸೃಷ್ಟಿ ಸ್ಥಿತಿ ಸಂಹಾರಗಳಾಗಿರ್ಪವು. ಆ ವಿವೇಕವೆ ಬ್ರಹ್ಮ ಅಗ್ನಿಯುಪಾಧಿಯ ಹೊಂದಿ ಅ[ದ]ರಕೊಡ್ಡಿ ಪ್ರಕಾಶಿಸುತ್ತಿರ್ಪಂತೆ ವಿವೇಕ ಕರ್ಮವ ಹೊಂದಿ ಜೀವರೂಪಮಾಗಿ ಅದರ ಕೊಡ್ಡಿ ಪ್ರಕಾಶಿಸುತ್ತಿಹುದು. ಆ ಜಡರೂಪಮಾದ ಕರ್ಮದಲ್ಲಿ ಚೈತನ್ಯರೂಪಮಾಗಿ ತಾನು ಪ್ರಕಾಶಿಸುತ್ತಿರ್ಪುದರಿಂ ಸರ್ವಗತನೆಂಬುದು ಸಹಜಮಾಯಿತ್ತು ಆವರಣಮಳಿದಲ್ಲಿ ಉಪಾಧಿಯಳಿದ ತೇಜಸ್ಸು ಸೂರ್ಯನೊಳೈಕ್ಯಮಪ್ಪಂತೆ, ಉಪಾಧಿಯಳಿದ ವಿವೇಕ ಶಿವನೊಳಗೆ ಐಕ್ಯಮಪ್ಪಲ್ಲಿ ಭೇದಮಲ್ಲದೆ, ಲಯಮಿಲ್ಲದೆ ಮಹಪ್ರಕಾಶದಲ್ಲಿ ಬೆರದು ಪ್ರಕಾಶಿಸುತ್ತ ಪುನಃ ಕರ್ಮಕ್ಕೆ ಬಾರದೆ ಮಹದಲ್ಲೆ ಪ್ರಕಾಶಿಸುತ್ತಿರ್ಪುದೆ ಮೋಕ್ಷವಾದುದರಿಂ ಸೃಷ್ಟಿ ಸಂಹಾರಂಗಳೆಂದುಂತು ಭೇದಾ ಭೇದಂಗಳೆರಡೂ ಮಿಥ್ಯ. ಈ ವರ್ತಮಾನಕಾಲದಲ್ಲೆ ಭೂತ ಭವಿಷ್ಯಂಗಳು ಹುಟ್ಟಿ ಆ ವರ್ತಮಾನವ ಮರೆಗೊಂಡಿಪ್ಪಂತೆ, ಈ ನಿಜದಲ್ಲೆ ದ್ವೈತಾದ್ವೈತಂಗಳು ಪುಟ್ಟಿ ಆ ನಿಜಸುಖವ ಮರೆಗೊಂಡಿರ್ಪುದು. ಅದರಿಂ ವಿವೇಕವೆ ಬ್ರಹ್ಮವಾದುದರಿಂ ವಿವೇಕವೆ ಜಡರೂಪಮಾದ ಸೃಷ್ಟಿಮುಖಕಾದಿಯಾಗಿರ್ಪ ಸ್ಖಾಲಿತ್ಯ ಕಾರಣಮಾದ ಮನದೊಳಗೆ ಕೂಡಿದ ಜ್ಞಾನದಂತೆ ವಿವೇಕ ಸಾಕಾರೂಪಮಾದ ಸ್ವರೂಪಮಾಗಿ, ಆದಿ ವರ್ಣವಾಗಿಪ್ಪ ಆಕಾರದೊಳಗೆ ಕೂಡಿ ಆ ವಿವೇಕವೆ ಅವಿವೇಕಮಾಯಿತ್ತು. ಅದರಿಂ ಆತ್ಮನಾತ್ಮವೆಂಬ ಶ್ರುತಿವಚನದಿಂ ಆ ವಿವೇಕವೆ ಆತ್ಮಮಾಗಿರ್ಪುದು, ಅನಾತ್ಮವಾಗಿರ್ಪುದು. ಗರ್ಭದಲ್ಲಿರ್ಪ ಶಿಶುವು ಕೇವಲವು ಜಾತಿಸ್ಮರಾದಿತ್ವಾದಿ ವಿವೇಕಮುಂಟಾಗಿರ್ದು ಭೂಪತನದಲ್ಲಿ ಅಮಂಗಲ ರೋದನ ರೂಪಮಾದ ಅಕಾರದೊಳಗೆ ಕೂಡಿ ಅವಿವೇಕಿಯಾಗಿಪ್ಪಂತೆ, ಸಾಕಾರಮಾದಲ್ಲಿ ರುಧಿರದೊಳಗೆ ಕೂಡಿ ಪಂಚಭೂತ ರೂಪಮಾದ ರುದ್ರನಾಗಿರ್ಪನು. ನಿರಾಕಾರದಲ್ಲಿ ನಿರುಪಾಧಿಕ ಮಂಗಳಾತ್ಮ ವಿವೇಕಮಾಗಿರ್ಪನು. ಆತ್ಮ ವಿವೇಕವೆ ಶಿವನಾಗಿರ್ಪುದರಿಂ ಆತ್ಮ ವಿವೇಕಮುಳ್ಳ ಪುರುಷರ ಶಿವನೆಂದು ತಿಳಿಯಬೇಕು. ಅಂತಪ್ಪ ವಿವೇಕದಿಂ ಭಾವವನೇಕಮುಖದಿಂ ಜನಿಸುತ್ತಿರ್ಪುದು ; ಆ ಭಾವದಿಂ ವಿವೇಕಮಧಿಕಮಾಗಿರ್ಪಂತೆ, ಆ ಶಿವನಲ್ಲಿ ಪ್ರಪಂಚ ಅನೇಕ ಮುಖದಲ್ಲಿ ಜನಿಸುತ್ತಿರ್ಪುದು ಆ ಪ್ರಪಂಚ ಮುಖದಲ್ಲಿ ಶಿರಮಹಿಮೆಯೆ. ಅಧಿಕಮಾಗಿರ್ಪ ಮಹಿಮೆಯ ಸ್ವಭಾವಲೀಲೆ. ಆ ಸ್ವಭಾವಲೀಲೆಯೇ ಆತ್ಮವಿವೇಕ. ಆತ್ಮವಿವೇಕಮುಳ್ಳ ಪುರುಷನೆ ಶಿವಸ್ವರೂಪು. ಅಂತಪ್ಪ ಶರಣರ ಚರಣಕಮಲಂಗಳ ಪರಿಮಳದಲ್ಲಿ ಪರವಶನಾಗಿರ್ಪಂತೆ ಮಾಡಿ ಸಲಹಾ ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೆ.