Index   ವಚನ - 121    Search  
 
ಕೇವಲ ವಿವಿಚ್ಚ ಜ್ಞಾನವೇ ಶಿವನು. ಆ ಶಿವನೆ ಪ್ರಪಂಚ ಸಂಹಾರಮೂರ್ತಿ. ಆ ಶಿವನು ಪ್ರಪಂಚವ ಸಂಹರಿಸಿದಲ್ಲಿ ಶೇಷ ವಸ್ತು ತದ್ಭಾವವೇ ಘಟವಳಿದಲ್ಲಿ ಘಟಭಾವವುಳಿದಂತೆ ಮೊದಲಿಂದಲೂ ಸಂಹಾರ ಮುಖದಲ್ಲಿ ಅಳಿಯದೆ ಉಳಿದಿಪ್ಪುದರಿಂ ಆ ಭಾವವೆ ಆದಿಶೇಷಮಾಯಿತ್ತು. ಆ ವಿವೇಕಕ್ಕೆ ಆ ಭಾವವೆ ಅಲಂಕಾರಮಾದುದರಿಂ ಶಿವನಿಗೆ ಅದೆ ಆಭರಣಮಾಯಿತ್ತು ಸಕಲಸಂಹಾರ ಪ್ರಪಂಚಕ್ಕೂ ಆ ಭಾವ ತಾನೆ ಆಧಾರಮಾಯಿತ್ತು. ಅದು ವಿಷ್ಣುವಿಗೆ ಶಯ್ಯಮಾಗಿರ್ಪುದೆಂತೆಂದಡೆ: ವಿಷ್ಣುವೆಂದರೆ ವ್ಯಾಪಿಸಲ್ಪಟ್ಟಂಥ ಸ್ವಕರ್ಮ. ಅದಕ್ಕೆ ಪ್ರಕೃತಿಯೆಂಬ ನಾಮ- ಉತ್ಕೃಷ್ಟಮಾಗಿ ಮಾಡಲ್ಪಟ್ಟುದುಯೆಂಬುದರ್ಥ. ಅದು ಪ್ರಪಂಚ ರಕ್ಷಣ ಕಾರಣಮಾಗಿರ್ಪುದರಿಂ ಪ್ರಪಂಚಮೂಲವೆ ಪ್ರಕೃತಿ, ಪ್ರಪಂಚಲಯಮಾದಲ್ಲಿ ಪ್ರಪಂಚ ಕರ್ಮದಲ್ಲಿ ಭಾವದಲ್ಲಿ ಸುಷುಪ್ತಿಯ ಹೊಂದಿರ್ಪುದರಿಂ ಆ ಶೇಷನಲ್ಲಿ ವಿಷ್ಣು ಶಯನಮಾಗಿರ್ಪುದರಿಂ ಸಾಕಾರದಲ್ಲಿ ಕರ್ಮ, ನಿರಾಕಾರದಲ್ಲಿ ಭಾವ, ಎರಡಕ್ಕೂ ಭೇದಮಿಲ್ಲದೆ ವಿಷ್ಣುವ್ಯಾಪಕತ್ವವೂ ಶೀಲಸ್ವಭಾವವೂ ಏಕಮಾಗಿರ್ಪುದು. ಭಾವಮುಖದಲ್ಲಿ ಪ್ರಕೃತಿಯುಕ್ತಮಾದ ಸಕಲ ವಿಷಯಂಗಳು ವ್ಯಾಪಿಸಿರ್ಪುದರಿಂ ಶೇಷಮುಖವೇ ವಿಷಾನ್ವಿತವಾಯಿತ್ತು. ಶೇಷ ಕ್ಷಣವೆ ಭಾವ; ಭಾವ ವ್ಯವಹಾರ ಅವ್ಯವಹಾರದಲ್ಲಿ ಪ್ರಕಾಶಿಸುತ್ತಿರ್ದ ಜ್ಞಾನವೇ ಶಿರೋರತ್ನ. ಅದು ಅಚೇತನವಚೇತನ ಮಾಡುತಿರ್ಪುದು. ಆ ಈಶ್ವರ ಭಾವದಲ್ಲಿ ಪರವಶಮಾಗಿರ್ಪ ಪ್ರಕೃತಿ ತದ್ವಿಚಾರ ಜ್ಞಾನದಿ ಚೇತನಮಾಗಿ ಕರ್ಮ ರೂಪದಲ್ಲಿ ಪ್ರಪಂಚಮುಖದಲ್ಲಿ ಪ್ರವಹಿಸುವಲ್ಲಿ ಕಾಲೋಚಿತ ಕರ್ಮ, ಭಿನ್ನ ಕರ್ಮ, ಉತ್ಕೃಷ್ಟ ಕರ್ಮ ಈ ಮೂರರ್ಥಮುಳ್ಳುದೆ ಪ್ರಕೃತಿ. ಅದು ಸೃಷ್ಟಿ ಸ್ಥಿತಿ ಸಂಹಾರರೂಪಮಾಗಿರ್ಪುದು. ಅದರಿಂ ವಿವೇಕವೇ ಶಿವನು, ಪ್ರಕೃತಿಯೇ ವಿಷ್ಣು, ಅದರಿಂ ಪ್ರಕೃತಿಯೇ ಕರ್ಮ, ವಿವೇಕವೇ ಜ್ಞಾನ, ಆ ಕರ್ಮಮುಖದಲ್ಲಿ ಹುಟ್ಟುತ್ತಿರ್ಪ ಕಾರ್ಯವೇ ಬ್ರಹ್ಮನು. ಅದು ಸಾಮ, ದಾನ, ಭೇದ ದಂಡಂಗಳೆಂಬ ಚತುರ್ಮುಖಗಳಿಂದೊಪ್ಪುತಿಹುದು. ಆ ಕಾರ್ಯಮುಖದಲ್ಲಿ ಹುಟ್ಟುತ್ತಿರ್ಪ ಪ್ರಪಂಚವೇ ವಿಶ್ವಪ್ರಪಂಚ. ಆ ಕಾರ್ಯಕ್ಕೆ ವಿವೇಕವೇ ಶಕ್ತಿಯಾಗಿಹುದು. ಅದು ವಿವೇಕಕ್ಕೆ ಪ್ರಕೃತಿಯೆ ಶಕ್ತಿಯಾಗಿಹುದು. ಆ ಪ್ರಕೃತಿಗೆ ಕಾರ್ಯವೇ ಶಕ್ತಿಯಾಗಿಹುದು. ಆ ಕಾರ್ಯ ಪ್ರಪಂಚವ ಸೃಷ್ಟಿಸುತ್ತಿಹುದು, ಆ ಕರ್ಮ ಪ್ರಪಂಚವ ರಕ್ಷಿಸುತ್ತಿಹುದು. ವಿವೇಕ ಇದೆಲ್ಲವನ್ನು ಭಾವದಲ್ಲಿ ಉಪಸಂಹಾರವ ಮಾಡಿದಲ್ಲಿ ಕಾರ್ಯಕ್ಕೆ ಮೃತಿ, ಕರ್ಮಕ್ಕೆ ಮೂರ್ಛೆ, ಜ್ಞಾನ ಒಂದೇ ಚೇತನಮಾಗಿಹುದು. ಅಂತಪ್ಪ ಆದಿ ಭಾವವೇ ಶೇಷನು. ಅದಕ್ಕೆ ಗರುಡನು ಪಗೆಯಾಗಿರ್ಪುದೆಂತೆಂದಡೆ: ಗಾರುಡ ಮೂಲವೆ ಗರುಡನು; ಗಾರುಡವೆಂದರೆ ಪ್ರಪಂಚ. ತನ್ಮೂಲವಾಗಿರ್ಪ ಮಿಥ್ಯವೇ ಗರುಡನು. ಅದು ಪ್ರಕೃತಿಗೆ ಆಧಾರಮಾಗಿ ವಿವೇಕ ಭಾವ ಸಂಹರಿಸುತ್ತಿಹುದು. ಪ್ರಕೃತಿಯುಕ್ತಭಾವ ಸಂಹರಿಸಲಾರದು. ಈ ಪ್ರಕೃತಿಯುಕ್ತದಲ್ಲಿ ಭಾವವನಂತವಾಗಿ ಸಕಲ ಪ್ರಪಂಚವನ್ನು ಬಳಸಿರ್ಪುದರಿಂ ಕುಂಡಲಿಯಾಯಿತ್ತು. ಅದು ವಿವೇಕ ಮುಖದಲ್ಲಿ ಒಂದೆಯಾಗಿ ಜ್ಞಾನಲಿಂಗಕ್ಕೆ ಭಾವವೆ ಆಭರಣಮಾಗಿ ಆನಂದ ಕಳೆಯೆ ನಿಜಮಾಗಿರ್ಪುದೆ ಮೋಕ್ಷ. ಅಂತಪ್ಪ ಕೈವಲ್ಯ ಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ.