Index   ವಚನ - 125    Search  
 
ಶತಮಾನಃ ಪುರುಷಃ ಶತೇಂದ್ರಿಯ' ಎಂಬ ಶ್ರುತಿವಚನದಿಂ ನೂರು ಸಂಖ್ಯೆಯುಳ್ಳ ಆ ವಿರಾಟ್ಪುರುಷನು ಅನುಭವಕಾರಣಮಾದ ವಯೋರೂಪಮಾದ ಷೋಡಶ ಸಂಖ್ಯೆಯೇ ತಾನಾಗಿ ಉಳಿದ ಚೌರಾಸೀತಿ ಸಂಖ್ಯೆಯೇ ಪಂಚಭೂತಂಗಳೆಂಬ ಪಂಚಶೂನ್ಯಂಗಳೊಳಗೆ ಕೂಡಿ ಚೌರಾಶೀತಿ ಲಕ್ಷ ಭೇದಂಗಳಾದ ಜೀವಜಾಲಂಗಳಾಗಿ ಉಳಿದಂಶವೆ ಪರಮನಾಗಿ, ಆ ಜೀವಜಾಲಂಗಳಿಗೆ ಆ ಪರಮವೆ ಕಾರಣಮಾಗಿರ್ಪುದು. ಪಂಚಶೂನ್ಯಂಗಳಾದ್ಯಂತಂಗಳಲ್ಲಿರ್ಪ ಚೌರಾಶೀತಿ ಲೆಕ್ಕದಲ್ಲಿ ಎಂಬತ್ತುಲಕ್ಷ ಜೀವಂಗಳು ಆದಿಯಾಗಿರ್ಪಲ್ಲಿ ಚಾತುರ್ಲಕ್ಷ ಭೇದವಡೆದ ಮನುಷ್ಯ ಜೀವಂಗಳೆ ಕಡೆಯಾಗಿಪ್ಪವೆಂತೆಂದರೆ: ಸಕಲ ಜನ್ಮಂಗಳಿಗೂ ಮನುಷ್ಯನೇ ಕಡೆ. ಈ ಮನುಷ್ಯಜನ್ಮದಲ್ಲಿ ಮಾಡಿದ ಕರ್ಮದಿಂ ಸಕಲ ಜನ್ಮಂಗಳನೆತ್ತಿ ಅನುಭವಿಸುತ್ತಿರ್ಪುದರಿಂ ಅದೇ ಆದಿ ಇದೇ ಅಂತ್ಯಮಾಯಿತ್ತು. ಮಧ್ಯೆ ಇರ್ಪ ಪಂಚಭೂತಂಗಳೆಂಬ ಪಂಚ ಶೂನ್ಯಂಗಳಳಿಯಲು ಎಂಬತ್ತುನಾಲ್ಕು ಹದಿನಾರರೊಳಗೆ ಕೂಡಿ ನೂರಾಯಿತ್ತು. ಸೃಷ್ಟಿ ಸ್ಥಿತಿಗಳೆಂಬ ಮಿಥ್ಯ ಶೂನ್ಯಂಗಳೊಳಗೆ ಕೂಡಿದ ಸಂಹಾರಮೊಂದೆ ನಿಜಮಾಯಿತ್ತು. ಆ ನೂರ ಹತ್ತರಿಂದ ಕಳೆಯೆ ನಿಂತುದು ಹತ್ತಾಯಿತ್ತು ಹತ್ತ ಒಂದರಿಂದ ಕಳೆಯೆ ನಿಂತವಸ್ತು ಒಂದೆಯಾಯಿತ್ತು. ಅದ ಕಳೆವುದಕ್ಕೆ ಒಂದು ವಸ್ತು ಇಲ್ಲದಿರ್ಪುದರಿಂ ಕೂಡತಕ್ಕವಸ್ತುವಲ್ಲದೆ ಕಳೆಯತಕ್ಕ ವಸ್ತುವಲ್ಲವಾಯಿತ್ತು. ಕೂಡುವುದೆಲ್ಲ ಮಿಥ್ಯವಾಗಿ ಕಳೆವುದಕ್ಕೆ ಬೇರೊಂದು ವಸ್ತುವಿಲ್ಲದಿರ್ಪುದರಿಂ ತಾನೊಂದೆ ನಿಜಮಾಯಿತ್ತು. ಆ ನಿಜವೊಂದೆ ಉಂಟಾದುದು ಮಿಕ್ಕುದಿಲ್ಲವಾದುದರಿಂ ಆ ತಥ್ಯಮಿಥ್ಯಗಳೆರಡೂ ನಿತ್ಯಮಾಯಿತ್ತು. ಆ ಸತ್ಯದಿಂ ಕಾಣಬರುತ್ತಿರ್ಪುದೆ ಮಿಥ್ಯ. ಆ ಮಿಥ್ಯದಿಂ ಪ್ರಕಾಶಿಸುತ್ತಿರ್ಪುದೆ ಸತ್ಯ. ಒಂದರ ಗುಣವನೊಂದು ಪ್ರಕಾಶವಮಾಡುತ್ತಿರ್ಪುದರಿಂ ಅವಕ್ಕವೆ ಗುಣಂಗಳಾಯಿತ್ತು. ಅಂತಪ್ಪ ಸತ್ಯವೆ ನಿಜ. ನಿಜದಲ್ಲಿ ಪ್ರಕಾಶಮಾಗಿರ್ಪುದೆ ಜ್ಞಾನ. ಸತ್ಯ ಜ್ಞಾನಸಂಗದಲ್ಲಿ ಪರಿಪೂರ್ಣಮಾಗಿ ಪ್ರಕಾಶಿಸುತ್ತಿರ್ಪುದೆ ಆನಂದ. ಅಂತಪ್ಪ ಸಚ್ಚಿದಾನಂದಮಯನಾಗಿ ಮೂರು ಮೂಲೆಯುಳ್ಳ ಒಂದು ವಸ್ತು ತಾನಾಗಿರ್ಪ ಬ್ರಹ್ಮ ತನ್ನ ಮಹಿಮಾಪ್ರಕಟನ ನಿಮಿತ್ಯ ತನ್ನಲ್ಲಿಯೇ ಭಿನ್ನಮಾಗಿರ್ಪ. ನಿಜ ಛಾಯಾಮಿಥ್ಯ ಮಾಯಾ ಸಂಗಮಾದಲ್ಲಿ ಸತ್ಯ ಮಿಥ್ಯದೊಳಗೆ ಕೂಡಿ ಉಂಟಾಗಿಯಿಲ್ಲಮಾಗುತ್ತಿರ್ಪ ಶರೀರಮಾಯಿತ್ತು. ಜ್ಞಾನ ಮಿಥ್ಯದೊಳಗೆ ಕೂಡಲು ಜ್ಞಾನ ಜ್ಞಾನರೂಪಮಾದ ಜೀವಮಾಯಿತ್ತು. ಆನಂದ ಮಿಥ್ಯದೊಳಗೆ ಕೂಡಲು ಸುಖದುಃಖಕಾರಣಮಾದ ಮನಸ್ಸಾಯಿತ್ತು. ಇಂತಪ್ಪ ಮಿಥ್ಯದೊಳಗೆ ಕೂಡಿ ಆ ಬ್ರಹ್ಮವೇ ಚಿದ್ರೂಪಮಾದನಂತಗಳಾಗಿ ಹೆಚ್ಚಿ ಆ ಮಿಥ್ಯಾಕ್ರೀಡೆಗಳನನುಭವಿಸುತ್ತಿರ್ಪ ಮಿಥ್ಯಾಭವವನ್ನು ಉಪಸಂಹರಿಸಿ ಕಳದು ಆ ಮಿಥ್ಯವ ಮಿಥ್ಯವ ಮಾಡುವುದಕ್ಕೆ ತಾನೆ ಕಾರಣಮಾಗಿ ನಿಂತ ಅಖಂಡ ಸತ್ಯಜ್ಞಾನಾನಂದ ಪದಾರ್ಥ ತಾನೊಂದೆಯಾಗಿರ್ಪ ಮಹಾಲಿಂಗವೇ ಇಷ್ಟಮಾದಲ್ಲಿ ಶರೀರ ಮಿಥ್ಯ ಕಳೆದು ಲಿಂಗದೊಳಗೆ ಬೆರೆದ ತನುವೆ ಸತ್ತಾಯಿತ್ತು. ಆ ಲಿಂಗವೆ ಪ್ರಾಣಲಿಂಗಮಾದಲ್ಲಿ ಆ ಪ್ರಾಣದ ಮಿಥ್ಯವಳಿದು ಆ ಲಿಂಗದೊಳಗೆ ಲೀನಮಾದ ಜ್ಞಾನವೇ ಚಿತ್ತಾಯಿತ್ತು. ಎರಡರ ಸಂಗದಿಂದುದಿಸಿದ ಆನಂದ ಮಹಿಮೆಯೆ ಭಾವಲಿಂಗಮಾದಲ್ಲಿ ಮನಸ್ಸಿನ ಮಿಥ್ಯವಳಿದು ಆ ಭಾವಲಿಂಗದಲ್ಲಿ ಬೆರೆದ ಮನವೆ ಆನಂದರೂಪಮಾಯಿತ್ತು. ಇಂತಪ್ಪ ಸಚ್ಚಿದಾನಂದ ಮೂರ್ತಿಯಾದ ಗುರುರೂಪಮಾದ ಮಹಾಲಿಂಗಕ್ಕೆ ಅಷ್ಟೋತ್ತರ ಶತವಚನಂಗಳೆಂಬ ಸುವಾಸನೆವಿಡಿದಷ್ಟೋತ್ತರ ಶತದಳಂಗಳಿಂ ಸುವಾಕ್ಯಂಗಳೆಂಬ ಕೇಸರಂಗಳಂ ಪಂಚಾಕ್ಷರಿ ಬೀಜಂಗಳಿಂ ಪ್ರಕಾಶಿಸುತ್ತಿಪ್ಪ ಪ್ರಣವ ಕರ್ಣಿಕೆಯಿಂ ವಿರಾಜಿಸುತ್ತಿರ್ಪ ಚಿನ್ನದ ಪುಂಡರೀಕ ಭಕ್ತಿರಸ ಪೂರಿತಮಾಗಿರ್ಪ ಹೃದಯ ಸರಸಿಯೊಳು ವಿವೇಕ ಬಿಸದೊಳಗೆ ಕೂಡಿ ಬೆಳದು ಮಹಾಗುರೂಪದೇಶವೆಂಬ ಭಾಸ್ಕರೋದಯದಿಂ ಜಿಹ್ವಾಮುಖದಲ್ಲಿ ವಿಕಸನಮಾಗಿ ಜಗದ್ಭರಿತಮಾದ ದಿವ್ಯವಾಸನೆಯಿಂ ಮೀಸಲಳಿಯದ ಪರಮ ಪವಿತ್ರಮಾಗಿರ್ಪ ದಿವ್ಯ ಕಮಲಮಂ ಮಹಾಲಿಂಗಕರ್ಪಿಸಿ ತತ್ಕರ್ಣಿಕಾಮಧ್ಯದಲ್ಲಿ ಭಾವಹಸ್ತದಲ್ಲಿ ತಲ್ಲಿಂಗಮಂ ತಂದು ಪ್ರತಿಷ್ಠೆಯಂ ಮಾಡಿ ತದ್ವಚನಾಮೃತ ರಸದಿಂದಭಿಷೇಕಮಂ ಮಾಡಿ ತತ್ ಜ್ಞಾನಾಗ್ನಿಯಿಂ ಮಿಥ್ಯಾಗುಣಂಗಳಂ ದಹಿಸಿ ಆ ಸತ್ವಸ್ವರೂಪಮಾಗಿರ್ಪ ಭಸ್ಮವಂ ಧರಿಸಿ ತನ್ಮಹಿಮಾವರ್ಣನೀಯಮಾಗಿರ್ಪಾಭರಣಂಗಳಿಂದಲಂಕರಿಸಿ ಸತ್ಕೀರ್ತಿಯೆಂಬ ವಸ್ತ್ರಮಂ ಸಮರ್ಪಿಸಿ ವೈರಾಗ್ಯ ಧರ್ಮವುಳ್ಳ ಹೃದಯವೆಂಬ ಶಿಲೆಯೊಳಗೆ ವಚನಮೆಂಬ ಸುಗಂಧದ ಕೊರಡಂ ಭಕ್ತಿರಸಯುಕ್ತಮಾಗಿ ತೆಯ್ದು ಅಲ್ಲಿ ಲಭ್ಯಮಾದ ಪರಮ ಶಾಂತಿಯೆಂಬ ಗಂಧಮಂ ಸಮರ್ಪಿಸಿ ತದ್ಬೀಜ ರೂಪಮಾಗಿರ್ಪ ತತ್ವವೆಂಬಕ್ಷತೆಯನಿಟ್ಟು ಮನವೆಂಬ ಕಾಷ್ಠದಲ್ಲಿ ಹೊತ್ತಿರ್ಪ ಜ್ಞಾನಾಗ್ನಿಯಲ್ಲಿ ಪಲವಿಧ ಗುಣಂಗಳೆಂಬ ದಶಾಂಗಧೂಪಮಂ ಬೆಳಗಿ ಊರ್ಧ್ವಮುಖಮಾಗಿರ್ಪ ತದ್ವಾಸನಾ ಧೂಪ ಧೂಮಮಂ ಸಮರ್ಪಿಸಿ ತದ್ವಚನ ಮುಖದಲ್ಲಿ ಸಕಲವು ಅಖಂಡಮಯಮಾಗಿ ಪ್ರಕಾಶಿಸುತ್ತಿರ್ಪ ಚಿಜ್ಯೋತಿ ನೀಲಾಂಜನಮಂ ಮಂಗಳಮಯಮಾಗಿ ಬೆಳಗಿ, ವದನವೆಂಬ ಘಂಟೆಯಲ್ಲಿ ನಾಲಗೆಯೆಂಬ ಕುಡುಹನು ಮೂಲಾಧಾರಮಾರುತನ ಮೊದಲನು ಭಾವದಲ್ಲಿ ಪಿಡಿದು ನುಡಿಸಿ ತನ್ಮುಖದಲ್ಲಿ ಪ್ರಕಾಶಮಾನಮಾಗಿ ಜಗದ್ಭರಿತಮಾದ ವಚನಾಘೋಷಂಗಳೆಂಬ ಘಂಟಾನಾದಮಂ ಸಮರ್ಪಿಸಿ ವಚನಾರ್ಥಂಗಳೆಂಬ ಪಲವಿಧ ಶುಚಿರುಚಿಗಳುಳ್ಳ ಪದಾರ್ಥಂಗಳಿಂ ತನ್ಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ ಪರಮಾನಂದಾಮೃತವನು ತೃಪ್ತಿ ಪಾತ್ರೆಯಲ್ಲಿಟ್ಟು ನೈವೇದ್ಯಮಂ ಸಮರ್ಪಿಸಿ ನಿರ್ಮಳ ಭಕ್ತಿ ರಸವೆಂಬ ಶುದ್ಧೋದಕಮಂ ನಿವೇದಿಸಿ ತನುಮನಃಪ್ರಾಣಂಗಳೆಂಬ ತಾಂಬೂಲಮಂ ಸತ್ಯ ಜ್ಞಾನಾನಂದ ರೂಪಮಾದ ಮಹಾಶಿವಲಿಂಗಮುಖದಲ್ಲಿ ಸಮರಸಾನುರಾಗದಿಂ ಪ್ರಕಾಶಮಾಗಿರ್ಪ ದಿವ್ಯತಾಂಬೂಲಮಂ ಸಮರ್ಪಿಸಿ ಲಿಂಗದೊಳಗುಪಭೋಗಿಸುತ್ತಿರ್ಪ ಅಷ್ಟ ಭೋಗಂಗಳೆ ಅಷ್ಟ ವಿಧಾರ್ಚನಂಗಳಾಗಿ ಆ ಲಿಂಗದೊಳಗೆ ಬೆರದು ಭೇದದೋರದಿರ್ಪ ಷೋಡಶ ಕಳೆಗಳೆ ಷೋಡಶೋಪಚಾರವಾಗಿ ತಲ್ಲಿಂಗ ಸಂಗವೆ ರತಿಯಾಗಿ ಎರಡೂ ಏಕಮಾಗಿರ್ಪ ನಿರ್ವಾಣ ಸುಖಮೆ ಪರಮಸುಖಮಾಗಿ ನೀನು ನಾನೆಂಬ ಭೇದವಳಿದು ಎರಡೂ ಒಂದಾಗಿ ಅಭೇದಾನಂದದಲ್ಲಿ ಬೇರೆವಾಂಛೆ ಇಲ್ಲಮಾಗಿ, ನೀನಲ್ಲದೆ ನಾನೇನೂವಲ್ಲೆ ಇದ ಬರದೋದಿ ಕೇಳಿ ಅರ್ಥವಂ ಮಾಡಿ ಆನಂದಿಸುವ ತದೀಯ ಭಕ್ತರ ವಾಂಛಿತವಂ ಸಲಿಸಿ ಮಿಥ್ಯಾಭ್ರಮೆಯಂ ನಿವೃತ್ತಿಯಂ ಮಾಡಿ ಪುನರಾವೃತ್ತಿ ರಹಿತ ಶಾಶ್ವತ ದಿವ್ಯಮಂಗಳಮಯ ನಿಜಾನಂದ ಸುಖವನಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ.