ಆತ್ಮಾಂಶವೆ ಚೈತನ್ಯ
ಅಂತಃಕರಣಾದಿ ಸಕಲ ಲೋಕದ್ವಿಕಾರ.
ಆ ಚೈತನ್ಯದಿಂ ಶಕ್ತಿ ಪ್ರಕಟನಮಾದಂತೆ
ಆತ್ಮನಿಂದಾಕಾಶ ಪ್ರಕಟನಮಪ್ಪುದು.
ಆ ಶಕ್ತಿಯಿಂ ಕರ್ಮಮುತ್ಪನ್ನಮಪ್ಪಂತೆ
ಆಕಾಶದಿಂ ವಾಯುವುತ್ಪನ್ನಮಪ್ಪುದು.
ಆ ಕರ್ಮದಿಂ ಧರ್ಮ ಜನಿಸುವಂತೆ,
ವಾಯುವಿಂದಗ್ನಿ ಜನಿಸುತ್ತಿಪ್ಪುದು.
ಆ ಧರ್ಮದಿಂ ಫಲಮುದಿಸುವಂತೆ
ಅಗ್ನಿಯಿಂ ಜಲಮುದಿಸುತ್ತಿಪ್ಪುದು.
ಆ ಫಲದಿಂದನುಭವ ಪ್ರತ್ಯಕ್ಷಮಾದಂತೆ
ಜಲದಿಂ ಪೃಥ್ವಿ ಪ್ರತ್ಯಕ್ಷಮಪ್ಪುದು.
ಆ ಅನುಭವದಲ್ಲಿ ಸುಖದುಃಖಂಗಳುದ್ಭವಿಸುವಂತೆ
ಪೃಥ್ವಿಯಲ್ಲಿ ಸ್ಥಾವರ ಜಂಗಮಂಗಳುದ್ಭವಿಸುವವು.
ಆ ಸುಖದುಃಖಂಗಳಲ್ಲಿ ಸ್ವರ್ಗ ನರಕಂಗಳುತ್ಪನ್ನಮಪ್ಪಂತೆ
ಆ ಸ್ಥಾವರ ಜಂಗಮಂಗಳಲ್ಲಿ
ಆಹಾರ ಮೈಥುನಂಗಳುತ್ಪನ್ನಮಪ್ಪವು.
ಅವೇ ಆವಾಹನ ವಿಸರ್ಜನ.
ಅಂತಪ್ಪ ಆವಾಹನ ವಿಸರ್ಜನೆಯೇ
ಹಂಸರೂಪಮಾದ ಚೈತನ್ಯ.
ಅಂತಪ್ಪ ಚೈತನ್ಯರೂಪವಾದ ಶಿವನು
ಸ್ವಶಕ್ತಿ ಪ್ರಕಟನ ನಿಮಿತ್ಯ
ಆಹಾರಮುಖಕ್ಕೆ ಪ್ರಪಂಚವ ಸಂಹರಿಸುತ್ತಿರ್ಪಂತೆ,
ಆಕಾಶ ಪ್ರಕಟನ ನಿಮಿತ್ಯ
ಆತ್ಮನು ಪ್ರಪಂಚವ ಸಂಹರಿಸುತ್ತಿರ್ಪನು.
ಜೀವನು ಸ್ವಧರ್ಮವನಾಶ್ರಯಿಸಿ ತೊಳಲುತ್ತಿರ್ಪಂತೆ
ಆತ್ಮನು ತೇಜೋಧರ್ಮವನಾಶ್ರಯಿಸಿ
ವ್ಯವಹರಿಸುತ್ತಿರ್ಪನು.
ಆ ಧರ್ಮಪದ ವಿಕ್ಷೇಪಣೆಯೇ ಕಾಲ,
ಆ ಕಾಲವೇ ಸಂಹಾರ ಹೇತು.
ಅಂತಪ್ಪ ಧರ್ಮವೇ ಬಸವ ನಾಮಾಂಕಿತಮುಳ್ಳ
ಮಹಾಗುರು.
ಅಂತಪ್ಪ ಮಹಾಗುರುವಿನ ಪಾದವಿಡಿದು
ಸೃಷ್ಟಿ ರಜೋರೂಪಮಾಗಿರ್ಪ
ಲಲಾಟಬೀಜಾಕ್ಷರಂಗಳನೊರಸಿ ಕೆಡಿಸಿ
ಆ ಪಾದವ ನನ್ನ ಹೃದಯದಲ್ಲಿ ಬರೆದು ಪಟಲಮಾಡಿದಲ್ಲಿ
ಆ ಕಾಲವಳಿದು ಕಾಲಾತೀತನಪ್ಪುದೆ ನಿಜ.
ಅಂತಪ್ಪ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ.
Art
Manuscript
Music
Courtesy:
Transliteration
Ātmānśave caitan'ya
antaḥkaraṇādi sakala lōkadvikāra.
Ā caitan'yadiṁ śakti prakaṭanamādante
ātmanindākāśa prakaṭanamappudu.
Ā śaktiyiṁ karmamutpannamappante
ākāśadiṁ vāyuvutpannamappudu.
Ā karmadiṁ dharma janisuvante,
vāyuvindagni janisuttippudu.
Ā dharmadiṁ phalamudisuvante
agniyiṁ jalamudisuttippudu.
Ā phaladindanubhava pratyakṣamādante
jaladiṁ pr̥thvi pratyakṣamappudu.
Ā anubhavadalli sukhaduḥkhaṅgaḷudbhavisuvante
pr̥thviyalli sthāvara jaṅgamaṅgaḷudbhavisuvavu.
Ā sukhaduḥkhaṅgaḷalli svarga narakaṅgaḷutpannamappante
ā sthāvara jaṅgamaṅgaḷalli
āhāra maithunaṅgaḷutpannamappavu.
Avē āvāhana visarjana.
Antappa āvāhana visarjaneyē
hansarūpamāda caitan'ya.
Antappa caitan'yarūpavāda śivanu
svaśakti prakaṭana nimitya
āhāramukhakke prapan̄cava sanharisuttirpante,Ākāśa prakaṭana nimitya
ātmanu prapan̄cava sanharisuttirpanu.
Jīvanu svadharmavanāśrayisi toḷaluttirpante
ātmanu tējōdharmavanāśrayisi
vyavaharisuttirpanu.
Ā dharmapada vikṣēpaṇeyē kāla,
ā kālavē sanhāra hētu.
Antappa dharmavē basava nāmāṅkitamuḷḷa
mahāguru.
Antappa mahāguruvina pādaviḍidu
sr̥ṣṭi rajōrūpamāgirpa
lalāṭabījākṣaraṅgaḷanorasi keḍisi
ā pādava nanna hr̥dayadalli baredu paṭalamāḍidalli
ā kālavaḷidu kālātītanappude nija.
Antappa sukhavanenagittu salahā
mahāghana doḍḍadēśikārya prabhuve.