Index   ವಚನ - 61    Search  
 
ಜೀವಕ್ಕೆ ಸಂಜೀವನವಾದ ಭಾವಸೂತಕವದೆಂತೆಂದೊಡೆ: ಶ್ರೀಗುರು ನಿರವಯ ಪರಿಪೂರ್ಣಬ್ರಹ್ಮ ಸಚ್ಚಿದಾನಂದ ಕರುಣಕಟಾಕ್ಷೆಯಿಂದೆ ಮಾರ್ಗಕ್ರಿಯಾಚರಣೆಯ ಮೀರಿದ ಕ್ರಿಯಾಚರಣೆ ಷಟ್ಸ್ಥಲಾನುಭಾವದಾರ್ಚನೆ ಅರ್ಪಣಗಳಿಂದ ಕೂಡಿ ಒಂದೊಡಲಾಗಿ ಎರಡಳಿದು, ತಾನೆ ಗುರುಸ್ವರೂಪ, ತಾನೆ ಲಿಂಗಸ್ವರೂಪ, ತಾನೆ ಜಂಗಮಸ್ವರೂಪ, ತಾನೆ ಪಾದೋದಕಪ್ರಸಾದ, ತನ್ನ ಚಿತ್ಪ್ರಭೆಗಳ ಚಿದ್ವಿಭೂತಿ ರುದ್ರಾಕ್ಷಿ ಮಂತ್ರ, ತಾನೆ ಅನಾದಿ ಪರವಸ್ತುವಾದುದರಿಂದ ಆ ಪರಮಗುರು ಬಂದು ತನುವಿನ ಕೊನೆಯೊಳಗೆ ಮಹದರುವಾಗಿ ನೆಲೆಗೊಂಡಿರ್ಪನು. ಪರಿಪೂರ್ಣಲಿಂಗ ಬಂದು ಸರ್ವೇಂದ್ರಿಗಳಲ್ಲಿ ತುಂಬಿತುಳುಕಾಡುತಿರ್ಪನು. ಪರಮಾನುಭಾವಜಂಗಮ ಬಂದು ಸತ್ಕರಣಂಗಳಲ್ಲಿ ಬೆಳಗ ಬೀರುತಿರ್ಪನು. ಚಿತ್ಪಾದೋದಕಪ್ರಸಾದವ ಜ್ಯೋತಿರ್ಮಯ ಕಳೆಗಲ ಸರ್ವಾಂಗದಿ ತುಂಬಿ ಬಿಂಬಿಸುತಿರ್ಪವುಯೆಂಬ ಬೆಳಗ ಕಂಡ ಮೇಲೆ ಅಸತ್ಯ ಅನಾಚಾರ ಅಜ್ಞಾನ ಕ್ರಿಯಾಚಾರ ಭ್ರಷ್ಟರ ಸಂಗವೆ ಭಯಭಂಗವೆಂಬ ಹರಗುರು ನಿರೂಪಣವ ಕಂಡು ಬಿಡಲಾರದೆ ಅವರೊಡವೆರದು, ಸಮರಸಕ್ರಿಯೆಗಳ ಬಳಸಿ, ಬಯಲಬ್ರಹ್ಮವಾಗಬೇಕೆಂದು ಭ್ರಾಂತುಭ್ರಮೆಗೊಂಡು, ಬಯಸಿ ಬಡವಾಗಿರ್ಪುದೆ ಪಂಚಮದಲ್ಲಿ ಜೀವನೊಳಗಣ ಅಂತರಂಗದ ಭಾವಸೂತಕ ಕಾಣಾ ನಿರವಯಪ್ರಭುಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.