Index   ವಚನ - 62    Search  
 
ಇಂತೀ ಪಾತಕಸೂತಕಗಳ ಬಾಹ್ಯಾಂತರಂಗದೊಳ್ ನಿಜಪ್ರಸನ್ನ ಪರಿಪೂರ್ಣಾನಂದ ಶ್ರೀಗುರುಕಟಾಕ್ಷದಿಂದ, ಮಹಾಜ್ಞಾನವೆಂಬಾಯುಧವಿಡಿದು ಕಡಿದು ಖಂಡರಿಸಿ, ಬಿಡುಗಡೆಚಿತ್ತರಾಗಿ, ಸತ್ಯಶುದ್ಧ ನಡೆನುಡಿಗೆ ಚೈತನ್ಯವಾದ, ಮಾರ್ಗಾಚಾರ ಮೀರಿದಾಚಾರಗಳನಾಚರಿಸಬೇಕಾದ ಕಾರಣದಿಂದ ಮುಂದೆ ಸರ್ವಾಚಾರದ ಘನತೆಯನುಸುರುವೆನು. ಶ್ರೀಗುರುಋಣದೊಳ್ ಆ ನಿಲುಕಡೆಯೆಂತೆಂದೊಡೆ: ಅಯ್ಯಾ ಆಚಾರವೆ ಯೋಗ್ಯ ಗುರು, ಆಚಾರವೇ ಯೋಗ್ಯಪಾದೋದಕ ಪ್ರಸಾದ ಆಚಾರವೆ ಯೋಗ್ಯವಾದ ವಿಭೂತಿ ರುದ್ರಾಕ್ಷಿ ಮಂತ್ರ, ಆಚಾರವೆ ಯೋಗ್ಯವುಳ್ಳ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ ನಿರವಯವಸ್ತು ನೋಡಾ. ಆಚಾರವೇ ಭಕ್ತ, ಅನಾಚಾರವೆ ಭವಿ, ಆಚಾರವೆ ಪ್ರಮಥಗಣಾರ್ಪಿತ, ಅನಾಚಾರವೆ ಪ್ರಮಥಗಣಕ್ಕನಾರ್ಪಿತ, ಆಚಾರವೆ ಪರಶಿವನ ಘನಕ್ಕೆ ಘನಮಾರ್ಗ, ಅನಾಚಾರವೆ ನರಸುರಹರಿಯಜ ಇಂದ್ರಾದಿಗಳ ಅಪಮಾನದ ಯೋಗ್ಯಮಾರ್ಗ. ಈ ಗುರುವಾಕ್ಯವನರಿದು, ಎಚ್ಚರದಳೆದು, ತಾ ಬಂದ ಮುಕ್ತಿದ್ವಾರ, ತಾನಿರುವ ನಿಜಮುಕ್ತಿಮಂದಿರ, ತಾ ಬಯಲಾಗಿ ಹೋಗುವ ನಿರಂಜನದುಳುವೆಯ ತಿಳಿದು, ಮರವೆಯೆಂಬ ಮಾಯಾಪಾಶಕ್ಕೊಳಗಾಗದೆ, ಮಹದರುವಿನ ಗುರುಮಾರ್ಗದಿರವನರಿದು ನಡೆನುಡಿ ದೃಢಚಿತ್ತರಾಗಿ ಚಿದ್ಘನಲಿಂಗತನು ಲಿಂಗಮನ ಲಿಂಗಪ್ರಾಣ ಲಿಂಗಭಾವ ಲಿಂಗಕರಣೇಂದ್ರಿಯ ಭೋಗೋಪಭೋಗ ಲಿಂಗ ಸತಿಸುತ ಪಿತಮಾತೆ ಲಿಂಗಾರಾಧನೆ ಲಿಂಗಾರ್ಪಣ ಲಿಂಗಾನುಭಾವ ಲಿಂಗೈಕ್ಯನು. ಸಾರದ ಚಿದ್ಭೆಳಗಿನ ತಿಳುಹು ಅಚ್ಚೊತ್ತಿ ಪರಮಪಾತಕಸೂತಕವ ಸರ್ವಾವಸ್ಥೆಗಳಲ್ಲಿ ಮರೆದು, ನಿಮ್ಮ ನಿಜ ಚಿತ್ಕಳೆ ನೀನರಿದರೆ ಅನಾದಿಪ್ರಮಥಗಣದತ್ತ ಬನ್ನಿ ನಿಮ್ಮ ನಿಜ ಚಿದ್ಬೆಳಗಿನ ಕಳೆಗಳೊಪ್ಪುವ ಅಷ್ಟಾವರಣವ ಮರೆದರೆ ಅಜಹರಿಸುರರು ಬದ್ಧಭವದತ್ತ ಹೋಗಿರಯ್ಯಯೆಂದು ಕಲ್ಯಾಣದೊಳ್ ಪ್ರಮಥಗಣಸಾಕ್ಷಿಯಾಗಿ ಕಲಕೇತಯ್ಯಗಳು ನುಡಿದ ಪ್ರಸ್ತಾವದ ವಾಕ್ಯ ಕಾಣಾ ನಿರವಯಪ್ರಭುಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.