Index   ವಚನ - 11    Search  
 
ಒಂದು ಬಿದಿರಿಂಗೆ ಕವೆ ಮೂರು, ಆ ಕವೆಯ ಒಳಗೆ ಲಕ್ಕ ಸಿಬಿರು. ಮೂರು ಕವೆಯ ಕೊಚ್ಚಿಸಿ, ಬಿಲ್ಲ ಸಿಕ್ಕ ಬಿಡಿಸಿ, ಸೀಳಿದ ಬಿದಿರ ಹೊರೆಹೊರೆಯಲ್ಲಿ ನೆಯಿದೆ, ತೊಟ್ಟಿಲ ಸಂದ ಕಾಣದಂತೆ. ನಾಲ್ಕು ಕಾಲನಿಕ್ಕಿ, ಅಂದಅಂದವಾದ ತೊಟ್ಟಿಲ ದಂಡೆಯನಿಕ್ಕಿ, ಕಟ್ಟುವದಕ್ಕೆ ಶ್ರುತ ದೃಷ್ಟವೆಂಬೆರಡು ದಾರದಲ್ಲಿ ತೊಟ್ಟಿಲ ಕಟ್ಟಿ, ಗವರೇಶ್ವರಲಿಂಗಕ್ಕೆ ಹುಟ್ಟುಗೆಟ್ಟು ಹೋಗೋ ಎಂದು ಜೋಗುಳವಾಡಿದೆ.