Index   ವಚನ - 38    Search  
 
ದುಕೂಲ ಮುಂತಾದ ವಸ್ತ್ರಂಗಳಲ್ಲಿ, ಹೇಮ ಮುಂತಾದ ಆಭರಣಂಗಳಲ್ಲಿ, ಮೌಕ್ತಿಕ ರತ್ನ ಮುಂತಾದ ಪಾಷಾಣಂಗಳಲ್ಲಿ, ಚಂದನ ಗಂಧ ಮುಂತಾದ ಸುವಾಸನೆಯಲ್ಲಿ, ಅಂದಳ ಛತ್ರ ಚಾಮರ ಕರಿ ತುರಗಂಗಳು ಮುಂತಾದ ತಾನು ಸೋಂಕುವ ವೈಭವ ಮುಂತಾದ ಸಕಲಸುಖಂಗಳು ಲಿಂಗಕ್ಕೆಂದು ಕಲ್ಪಿಸಿ, ಅಂಗೀಕರಿಸುವವನಿರವು ವಾರಿಶಿಲೆ ನೋಡನೋಡಲಿಕ್ಕೆ ನೀರಾದ ತೆರದಂತೆ, ಅಂಬರದ ವರ್ಣ ನಾನಾ ಚಿತ್ರದಲ್ಲಿ ಸಂಭ್ರಮಿಸಿ ಕಂಗಳು ಮುಚ್ಚಿ ತೆರೆವುದಕ್ಕೆ ಮುನ್ನವೆ ಅದರಂದದ ಕಳೆ ಅಳಿದಂತಿರಬೇಕು. ಇದು ಲಿಂಗಭೋಗೋಪಭೋಗಿಯ ಸಂಗದ ಸುಖ, ನಿರಂಗದ ನಿಶ್ಚಯ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ ವಿರಳವಿಲ್ಲದ ಪರಮಸುಖ.