Index   ವಚನ - 4    Search  
 
ಅಂಗಭವಿ, ಗುರುವಿನ ಹಂಗು; ಮನಭವಿ, ಲಿಂಗದ ಹಂಗು. ರುಚಿಭವಿ, ಜಂಗಮದ ಹಂಗು. ಇಂತೀ ತ್ರಿವಿಧದ ಭೇದವನರಿಯಬೇಕು. ಅಂಗಭವಿಯ ಕಳೆದಲ್ಲದೆ ಭಕ್ತನ ಮಾಡಬಾರದು. ಮನಭವಿಯ ಕಳೆದಲ್ಲದೆ ಲಿಂಗವ ಕೊಡಬಾರದು. ತನುರುಚಿಯ ಕಳೆದಲ್ಲದೆ ಜಂಗಮದ ಪ್ರಸಾದವ ಕೊಳಬಾರದು. ಹೀಂಗಲ್ಲದೆ, ಮಾತಿನ ಬಣಬೆಯ ಕಲಿತು, ನೀತಿಯ ಹೇಳುವರೆಲ್ಲರೂ ತ್ರಿವಿಧಕ್ಕಾಚಾರ್ಯರಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.