Index   ವಚನ - 151    Search  
 
ಊರ ಗುಬ್ಬಿಯೂ ಕಾಡಗುಬ್ಬಿಯೂ ಕೂಡಿಕೊಡು, ಒಣಗಿಲ ಮೇವ ತೆರನಂತೆ, ಭಕ್ತ ಮಾಡುವ ಠಾವಿನಲ್ಲಿ ಗುರುಚರ ಕರ್ತೃಗಳೆಂದು ಪೂಜಿಸಿಕೊಂಡು, ತಮ್ಮ ಆತ್ಮತೇಜರ ತಥ್ಯಮಿಥ್ಯಕ್ಕೆ ಕಡಿದಾಡುತ್ತ, ಆಸನ ಪಂಕ್ತಿ, ವಾಹನ ವಿಶೇಷ ಭೋಗಂಗಳಿಗೆ ಕುಕ್ಕನೆ ಕುದಿದು, ಬಿಕ್ಕನೆ ಬಿರಿವ ದುರ್ಮತ್ತರಿಗೆ ವಿರಕ್ತಿಯ ಮಾತಿನ ನಿಹಿತ ಇಂತೀ ಹೊತ್ತು ವಿಸ್ತರಿಸಲಾರದೆ, ಭಕ್ತರಿಚ್ಛೆವನರಿಯದೆ ತನ್ನ ನಿತ್ಯಾನಿತ್ಯವ ತಿಳಿಯಲರಿಯದೆ, ತನ್ನ ಪ್ರಕೃತಿಮತ್ಸರಗುಣದಿಂದ ಭಕ್ತರಂತಿಂತೆಂದು ನುಡಿವ, ತಟ್ಟುವ ಭಂಡನ, ಇಂತಿವರ ಕಂಡು ಅರ್ಚಿಸಿ ಪೂಜಿಸಿ ಶರಣೆಂಬ ಮಿಟ್ಟೆಯ ಭಂಡನ, ಈ ಉಭಯದ ಗುಣವನೆತ್ತಲಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.