Index   ವಚನ - 188    Search  
 
ಒಪ್ಪದ ಕಪ್ಪೆ ಸರ್ಪನ ನುಂಗಿತ್ತ ಕಂಡೆ. ತುಪ್ಪುಳು ಬಾರದ ಮರಿ ಹೆತ್ತ ತಾಯ ನುಂಗಿತ್ತ ಕಂಡೆ. ಕೊಂಬಿನ ಮೇಲಣ ಕೋಡಗ ಕೊಂಬ ನುಂಗಿತ್ತ ನೋಡಾ. ಬೀಸಿದ ಬಲೆಯ ಮತ್ಸ್ಯ ಗ್ರಾಸವ ಕೊಂಡಿತ್ತು ನೋಡಾ. ಅರಿದೆಹೆನೆಂಬ ಅರಿವ, ಮರೆದೆಹೆನೆಂಬ ಮರವೆಯ ಕಳೆದುಳಿದ ಪರಿಯಿನ್ನೆಂತೊ ? ಅರಿವುದೆ ಮರವೆ, ಮರೆವುದೆ ಅರಿವು. ಅರಿವು ಮರವೆ ಉಳ್ಳನ್ನಕ್ಕ ಕುರಿತು ಮಾಡುವುದೇನು ? ಕುರುಹಿಂಗೆ ನಷ್ಟ, ಆ ಕುರುಹಿನಲ್ಲಿ ಅರಿದೆಹೆನೆಂಬ ಅರಿವು ತಾನೆ ಭ್ರಮೆ. ಆರೆಂಬುದ ತಿಳಿದಲ್ಲಿ, ಕೂಡಿದ ಕೂಟಕ್ಕೆ ಒಳಗಲ್ಲ ಹೊರಗಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.