Index   ವಚನ - 228    Search  
 
ಕಳಬಂದ ಕಳ್ಳ ಬೆಳ್ಳನ ಕಾಲದೆಸೆಯಲ್ಲಿ, ಮರೆದು ನಿದ್ರೆಗೈದ ನೋಡಾ. ತೆರನನರಿಯದೆ ಎಚ್ಚತ್ತು, ಮನೆಯ ಒಡೆಯನೆಂದಡೆ ಮೆಚ್ಚುವರೆ ? ಅದು ಕಾರಣದಲ್ಲಿ, ಇರಿವ ಮನ ಪಾಪಕ್ಕೆ ಸಿಕ್ಕಿ, ಪಾಷಂಡಿಗಳಪ್ಪ ಪಾಶವ ಹೊತ್ತು ತಿರುಗುವ ವೇಷಧಾರಿಗಳೆಲ್ಲರೂ ಜಂಗಮವಲ್ಲದೆ, ಜ್ಞಾನಜಂಗಮವಲ್ಲ. ಕರದಲ್ಲಿ ಖರ್ಪರವಿಲ್ಲ, ಕೈಯಲ್ಲಿ ಕಟ್ಟಿಗೆಯಿಲ್ಲ, ಕರಣದಲ್ಲಿ ಮುದ್ರಿಕೆಯಿಲ್ಲ, ಶಿರದಲ್ಲಿ ಜಟಾಬಂಧವಿಲ್ಲ. ಕಕ್ಷೆಯಲ್ಲಿ ಭಸ್ಮಘಟಿಕೆಯಿಲ್ಲ. ಇವೆಲ್ಲ ರುದ್ರನ ವೇಷವ ಹೊತ್ತು, ಗ್ರಾಸಕ್ಕೆ ತಿರುಗುವ ಘಾತಕರೆಲ್ಲರೂ ಜಂಗಮವೆ ? ಮನದಾಸೆಯ ಬಿಟ್ಟು, ರೋಷವ ಕಿತ್ತು, ಮಹದಾಶ್ರಿತರಾಗಿ ನಾನೆಂಬುದ ತಾನರಿದು, ನಾ ನೀನೆಂಬುಭಯವನೇನೆಂದರಿಯದೆ, ತಾನು ತಾನಾದ, ನಿಃಕಳಂಕ ಮಲ್ಲಿಕಾರ್ಜುನಾ.