Index   ವಚನ - 297    Search  
 
ಖ್ಯಾತಿಲಾಭಕ್ಕೆ ಮಾಡುವಾತನೆಂಬುದನರಿದು, ಭೂತಹಿತ ದಯಾ ದಾಕ್ಷಿಣ್ಯಕ್ಕೆ ಇಕ್ಕುವಾತನೆಂಬುದನರಿದು, ಮಹಿಮಾಸ್ಪದದಿಂದ ವೀರವೈರಾಗ್ಯಗಳಿಂದ ಇಕ್ಕುವಾತನೆಂಬುದನರಿದು, ಮಾಡಿಕೊಂಡ ಕೃತ್ಯಕ್ಕೆ ಬಿಟ್ಟಡೆ ನುಡಿದಿಹರೆಂದು ಗುತ್ತಿಗೆಯಲ್ಲಿ ಇಕ್ಕುವಾತನೆಂಬುದನರಿದು, ಅರ್ತಿ ತಪ್ಪದೆ, ಬಾಹ್ಯದ ಭಕ್ತಿ ತಪ್ಪದೆ, ಅರ್ಚನೆ ಪೂಜನೆಗಳಲ್ಲಿ ನಿತ್ಯನೇಮ ತಪ್ಪದೆ, ಸುಚಿತ್ತ ಧರ್ಮದಲ್ಲಿ ಮಾಡುವಾತನನರಿದು, ಇಂತೀ ವರ್ಮಧರ್ಮಂಗಳಲ್ಲಿ ಅರಿದು, ಸುಮ್ಮಾನದ ಸುಖತರದಲ್ಲಿ ಮಾಡುವ ಧರ್ಮಿಗನನರಿದು, ಆರಾರ ಭಾವದ ಕಲೆಯನರಿದು, ಗುಣವೆಂದು ಸಂಪಾದಿಸದೆ, ಅವಗುಣವೆಂದು ಭಾವದಲ್ಲಿ ಕಲೆಗೆ ನೋವ ತಾರದೆ, ಇಂತೀ ಸರ್ವಗುಣಸಂಪನ್ನನಾಗಿ ಪೂಜಿಸಿಕೊಂಬ ಗುರುವಿಂಗೆ, ಚರಿಸುವ ಜಂಗಮಕ್ಕೆ, ಉಪಾಧಿ ನಷ್ಟವಾದ ವಿರಕ್ತಂಗೆ, ಕೂಗಿಂದ ನಮೋ ನಮೋ ಎಂದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.